ಕೊರೊನಾ ನಂತರ ಸ್ಯಾಂಡಲ್ ವುಡ್ ಸ್ವಲ್ಪ ಸ್ವಲ್ಪವೇ ತೆರೆದುಕೊಳ್ಳುತ್ತಿದೆ. ಇದರ ನಡುವೆ ಬೇರೆ ಭಾಷೆಯ ಚಿತ್ರಗಳ ಹಾವಳಿ ಮತ್ತೆ ಶುರುವಾಗಿದೆ. ಹಾಗಾಗಿ ಪುಷ್ಪ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ಯಾಗುತ್ತಿವೆ. ಮೊದಲೆಲ್ಲಾ ಅನ್ಯ ಭಾಷೆಯ ಚಿತ್ರಗಳ ಬಗ್ಗೆ ಸಣ್ಣ ವಿರೋದ ವ್ಯಕ್ತವಾಗುತ್ತಿತ್ತು, ಕಾರಣ ಕನ್ನಡದ ಸದಭಿರುಚಿಯ ಚಿತ್ರಗಳಿಗೆ ಥಿಯೇಟರ್ ಸಿಗದೆ ನಷ್ಟ ಅನುಭವಿಸಬೇಕಾಗುತ್ತಿತ್ತು, ಈಗ ವಿರೋದದ ದ್ವನಿಗಳು ಸ್ವಲ್ಪ ಜೋರಾಗಿ ಕೇಳಿಬರುತ್ತಿದೆ ಕಾರಣ ಥಿಯೇಟರ್ ಸಮಸ್ಯೆ.
ತೆಲುಗು ಮೂಲದ ಪುಷ್ಪ ಸಿನಿಮಾ ಕರ್ನಾಟಕದಲ್ಲಿ ಅಬ್ಬರಿಸುತ್ತಿರುವುದರ ಬಗ್ಗೆ ಕನ್ನಡ ಚಿತ್ರರಂಗದ ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಇದೀಗ ನಟಿ ರಚಿತಾ ರಾಂ ಕೂಡಾ ಪ್ರತಿಕ್ರಿಯಿಸಿದ್ದಾರೆ.ಲವ್ ಯೂ ರಚ್ಚು ಟ್ರೈಲರ್ ರಿಲೀಸ್ ವೇಳೆ ಮಾತನಾಡಿರುವ ರಚಿತಾ ರಾಂ, ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳನ್ನು ಬೆಳೆಸೋಣ ಎಂದಿದ್ದಾರೆ. ಈ ಮೂಲಕ ತೆಲುಗು ಮೂಲದ ಪುಷ್ಪಗೆ ಟಾಂಗ್ ಕೊಟ್ಟಿದ್ದಾರೆ.
‘ಪುಷ್ಪ’ ಸಿನಿಮಾದ ಹೆಸರು ಹೇಳದೆಯೇ ಗುಡುಗಿದ ನಟಿ ರಚಿತಾ ರಾಮ್, ”ಕನ್ನಡಿಗರಾದ ನಾವು ವಿಶಾಲ ಹೃದಯದವರು ಹಾಗಾಗಿ ಎಲ್ಲ ಭಾಷೆಯ ಸಿನಿಮಾಗಳನ್ನೂ ನಾವು ಒಳಗೆ ಬಿಟ್ಟುಕೊಳ್ಳುತ್ತೇವೆ. ಬೇರೆಯವರಿಗೆ ಅವರ ಭಾಷೆಯ ಮೇಲೆ ಎಷ್ಟು ಪ್ರೀತಿ ಇದೆಯೋ ಅದಕ್ಕಿಂತಲೂ ಹೆಚ್ಚಿನ ಪ್ರೀತಿ ನಮಗೆ ನಮ್ಮ ಭಾಷೆ ಮೇಲೆ ಇರುತ್ತೆ. ಹಾಗಾಗಿ ನಮ್ಮ ಭಾಷೆಯ ಸಿನಿಮಾವನ್ನು ನಾವು ಯಾವತ್ತೂ ಬಿಟ್ಟುಕೊಡಬಾರದು ‘ ಎಂದರು.
”ಕರ್ನಾಟಕದಲ್ಲಿಯೇ ಕನ್ನಡ ಸಿನಿಮಾಗಳಿಗೆ ನೆಲೆ ಇಲ್ಲದಂತೆ ಆಗಿದೆ. ಹೆಸರಿಗಷ್ಟೆ ಡಬ್ಬಿಂಗ್ ಎಂದು ಹೇಳಿಕೊಂಡು ಪರಭಾಷೆಯ ಸಿನಿಮಾಗಳು ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ. ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲಿಯೇ ಚಿತ್ರಮಂದಿರಗಳು ಸಿಗುತ್ತಿಲ್ಲ. ಚಿತ್ರಮಂದಿರಗಳಿಗಾಗಿ ಕನ್ನಡ ಸಿನಿಮಾಗಳು ಭೂತಗನ್ನಡಿ ಹಾಕಿಕೊಂಡು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು ರಚಿತಾ ರಾಮ್.
”ನಮ್ಮದು ಅಚ್ಚ ಕನ್ನಡ ಸಿನಿಮಾ. ನಿಜವಾದ ಕನ್ನಡ ಸಿನಿಮಾಗಳನ್ನು ನೋಡಿ ಬೆಂಬಲಿಸಿ” ಎಂದು ರಚಿತಾ ರಾಮ್ ಮನವಿ ಮಾಡಿದರು. ಆ ಮೂಲಕ ಡಬ್ಬಿಂಗ್ ಸಿನಿಮಾಗಳನ್ನು ತಿರಸ್ಕರಿಸಿರೆಂದು ಪರೋಕ್ಷವಾಗಿ ‘ಪುಷ್ಪ’ ಸಿನಿಮಾಕ್ಕೆ ಟಾಂಗ್ ನೀಡಿದರು ರಚಿತಾ ರಾಮ್.
ಇದಕ್ಕೂ ಮೊದಲು ನಟಿ ಅದಿತಿ ಪ್ರಭುದೇವ, ಧ್ರುವ ಸರ್ಜಾ ಮುಂತಾದ ನಟರೂ ಪುಷ್ಪ ವಿರುದ್ಧ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಅದಿತಿ ಪ್ರಭುದೇವ ಅಂತೂ ಇದು ನಮ್ಮ ಮನೆ ಅನ್ನ ತಿನ್ನೋದಕ್ಕೆ ಪಕ್ಕದ ಮನೆ ಅಂಕಲ್ ನ ಒಪ್ಪಿಗೆ ಕೇಳಿದಂತೆ ಎಂದಿದ್ದರು.
****