ಪ್ರತಿ ವರ್ಷದಂತೆ ಕಳೆದ ವರ್ಷ ಕೂಡ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆಯಬೇಕಿತ್ತು. ಆದರೆ, ಕೊರೊನಾ ಹಾವಳಿಯಿಂದಾಗಿ ಈ ಚಿತ್ರೋತ್ಸವ ನಡೆಯಲಿಲ್ಲ. ಇದು ಸಿನಿಪ್ರಿಯರನ್ನು ಇನ್ನಿಲ್ಲದಂತೆ ಕಾಡಿತ್ತು. ಈಗ ಮತ್ತೆ ಈ ಚಿತ್ರೋತ್ಸವವನ್ನು ನಡೆಸಲು ಚಲನ ಚಿತ್ರ ಅಕಾಡೆಮಿ ಮುಂದಾಗಿದೆ.
ಸಿನಿಪ್ರಿಯರಿಗೆ ಚಲನ ಚಿತ್ರೋತ್ಸವ ಹಬ್ಬ ಇದ್ದಂತೆ. ಸಿನಿಮಾ ನಿರ್ಮಾಣ ಮಾಡುವವರಿಗೆ ಹಾಗೂ ಸಿನಿಮಾ ನೋಡುವವರಿಗೆ ಚಿತ್ರೋತ್ಸವದಲ್ಲಿ ಭಾಗವಹಿಸುವುದೇ ಒಂದು ಹೆಮ್ಮೆ. ಸಿನಿಮಾ ಆಸಕ್ತರಿಗೆ ಪ್ರೋತ್ಸಾಹಿಸಲೆಂದೇ ವಿಶ್ವದಲ್ಲಿ ಸಾಕಷ್ಟು ಫಿಲ್ಮ್ ಫೆಸ್ಟಿವಲ್‌ಗಳು ನಡೆಯುತ್ತಲೇ ಇರುತ್ತವೆ. ಇಂತಹ ಚಲನ ಚಿತ್ರೋತ್ಸವದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಕೂಡ ಒಂದು.
ಬೆಂಗಳೂರು 13 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು 2022 ನೇ ಫೆಬ್ರವರಿ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಕಥಾಚಿತ್ರಗಳನ್ನು ಆಹ್ವಾನಿಸಲಾಗಿದೆ. ಏಷಿಯನ್, ಭಾರತೀಯ ಹಾಗೂ ಕನ್ನಡದ ಎಲ್ಲ ಉಪಭಾಷಾ ಚಲನಚಿತ್ರಗಳೂ ಸೇರಿದಂತೆ ಕನ್ನಡ ಸಿನಿಮಾಗಳು ಸ್ಪರ್ಧಾತ್ಮಕ ವಿಭಾಗದಲ್ಲಿರುತ್ತವೆ. ಪ್ರತಿಯೊಂದು ವಿಭಾಗದಲ್ಲೂ ಪ್ರಶಸ್ತಿ ವಿಜೇತ ಚಲನಚಿತ್ರಗಳಿಗೆ ನಗದು, ಸ್ಮರಣ ಫಲಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರವೇಶ ಪಡೆಯಲು ಕಥಾಚಿತ್ರಗಳು 1, ಜನವರಿ 2021 ರಿಂದ 30 ನವೆಂಬರ್ 2021 ರ ಅವಧಿಯಲ್ಲಿ ನಿರ್ಮಾಣಗೊಂಡವಾಗಿರಬೇಕು. ಹಾಗೂ 70 ನಿಮಿಷದ ಅವಧಿಯ ಚಲನಚಿತ್ರವಾಗಿರಬೇಕು. ಕನ್ನಡ ಹಾಗೂ ಕರ್ನಾಟಕದ ಉಪಭಾಷೆಗಳಲ್ಲಿ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ತಯಾರಾದ ಚಿತ್ರಗಳ ನಿರ್ಮಾಣದ ದಿನಾಂಕವನ್ನು ಭಾರತ ಸರ್ಕಾರದ ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್ ನೀಡಿದ ದಿನಾಂಕವನ್ನು ಆಧರಿಸಿ ಗಣನೆಗೆ ತೆಗೆದುಕೊಳ್ಳಲಾಗುವುದು.
13 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗಕ್ಕೆ ಸಿನಿಮಾಗಳನ್ನು ಸಲ್ಲಿಸಲು ಕೊನೆ ದಿನಾಂಕವನ್ನೂ ತಿಳಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಸಿನಿಮಾಗಳು ಡಿಸೆಂಬರ್ 27, 2021ರ ಒಳಗೆ ತಲುಪಬೇಕು. ಚಲನಚಿತ್ರಗಳನ್ನು ಸಲ್ಲಿಸಲು ಅನುಸರಿಸಬೇಕಾದ ನಿಯಮಾವಳಿ ಹಾಗೂ ಮಾರ್ಗಸೂಚಿಯನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ Biffes.org ನಲ್ಲಿ ನೀಡಲಾಗಿದೆ.
****