ಹೊಂಬಾಳೆ ಫಿಲಮ್ಸ್ ಬ್ಯಾನರ್ , ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಪ್ರಾರಂಭವಾಗಿದೆ. ಕನ್ನಡ ಸಿನಿಮಾರಂಗದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಭರವಸೆ ಮೂಡಿಸುತ್ತಿವೆ. ಇನ್ನು ಇತ್ತೀಚೆಗೆ ವಿಭಿನ್ನ ಕಥಾ ಹಂದರವುಳ್ಳ ಚಿತ್ರಗಳು ಚಿತ್ರಗಳು ಜನರ ಮೆಚ್ಚುಗೆ ಪಡೆದು ಕೊಳ್ಳುತ್ತಿವೆ. ಈ ಸಾಲಿಗೆ ಈಗ ಹೊಸ ಸಿನಿಮಾ ಸೇರಿಕೊಳ್ಳುತ್ತಿದೆ. ಅದುವೇ ‘ರಾಘವೇಂದ್ರ ಸ್ಟೋರ್ಸ್’.
‘ರಾಘವೇಂದ್ರ ಸ್ಟೋರ್ಸ್’ ಚಿತ್ರದ ಶೂಟಿಂಗ್ ಆರಂಭ ಆಗಿದೆ. ಚಿತ್ರದ ಮೊದಲ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ಚಿತ್ರಕ್ಕಾಗಿ ಮೈಸೂರಿನ ಚೌಟ್ರಿ ಒಂದರಲ್ಲಿ ಸೆಟ್ ಹಾಕಲಾಗಿದೆ. ‘ರಾಘವೇಂದ್ರ ಸ್ಟೋರ್ಸ್’ ಎನ್ನುವ ಶೀರ್ಷಿಕೆಯನ್ನು ದ್ವಾರಕ್ಕೆ ಅಡ್ಡಲಾಗಿ ಹಾಕಲಾಗಿದೆ. ನಟ ಜಗ್ಗೇಶ್ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಗ್ಗೇಶ್ ಮೊದಲ ದಿನದ ಶೂಟಿಂಗ್ ವೀಡಿಯೋ ಹಂಚಿಕೊಂಡಿದ್ದಾರೆ. ಜಗ್ಗೇಶ್ ಅವರು ಹಂಚಿಕೊಂಡ ಈ ವೀಡಿಯೋ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ರಾಘವೇಂದ್ರ ಸ್ಟೋರ್ಸ್ ದ್ವಾರದ ಬಳಿ ನಟ ಜಗ್ಗೇಶ್ ಪಂಚೆಯುಟ್ಟು, ಮೇಕಪ್ ಹಾಕಿಕೊಂಡು ನಿದ್ದೆಗಣ್ಣಿನಲ್ಲಿ ಕೂತಿದ್ದಾರೆ. ಮುಂಜಾನೆ ಶೂಟಿಂಗ್ನಲ್ಲಿ ಜಗ್ಗೇಶ್ ಅವರು ಭಾಗವಹಿಸಿದ ಸಂದರ್ಭ ಇದು. ಈ ಸಿನಿಮಾ ಈ ರಾಘವೇಂದ್ರ ಸ್ಟೋರ್ಸ್ ಸುತ್ತಲು ನಡೆಯುತ್ತದೆ ಎನ್ನುವುದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ಹಾಗಾಗಿ ಈ ಸ್ಟೋರ್ ಒಳಗೆ ಏನೆಲ್ಲಾ ಇರುತ್ತದೆ ಎನ್ನುವ ಕುತೂಹಲ ಮೂಡಿದೆ. ಪೋಸ್ಟ್ ಹಂಚಿಕೊಂಡ ನಟ ಜಗ್ಗೇಶ್ ಅವರು “ರಾಘವೇಂದ್ರ ಸ್ಟೋರ್ಸ್ ಚಿತ್ರೀಕರಣದಲ್ಲಿ, ಶುಭದಿನ” ಎಂದು ಬರೆದುಕೊಂಡಿದ್ದಾರೆ.
****