ಈಗ ಸ್ವತಃ ಡಾಲಿ ಧನಂಜಯ್ ಒಬ್ಬ ಸಾಮಾನ್ಯ ವ್ಯಕ್ತಿಯಂತೆ ಆಟೋ ಡ್ರೈವರ್ ವೇಷ ಧರಿಸಿ ಫೀಲ್ಡಿಗಿಳಿದು ಚಿತ್ರದ ಪ್ರಮೋಷನ್ ಮಾಡುತಿದ್ದಾರೆ. ಪ್ಯಾಸೆಂಜರ್ ಗಳಿಗೆ ತಾವು ಪ್ರಯಾಣಿಸುತ್ತಿರುವ ಆಟೋ ಡ್ರೈವರ್ ಡಾಲಿ ಧನಂಜಯ್ ಎಂದು ಗುರುತಿಸಿ ಫುಲ್ ಥ್ರಿಲ್ ಆಗಿದ್ದಾರೆ.ಬೆಳ್ಳಿ ಪರದೆ ಮೇಲೆ ನೋಡುತ್ತಿದ್ದ ತಮ್ಮ ನೆಚ್ಚಿನ ನಟನೊಬ್ಬ ತಾವು ಟ್ರಾವೆಲ್ ಮಾಡುತ್ತಿರುವ ಆಟೋದ ಡ್ರೈವರ್ ಎಂದರೆ ಆ ಕ್ಷಣಕ್ಕೆ ಅವರಿಗೆ ಏನನ್ನು ಎಕ್ಸ್ಪ್ರೆಸ್ ಮಾಡಲಾಗದ ಖುಷಿ, ಸಂತೋಷ ಎಲ್ಲವೂ ಒಮ್ಮೆಲೆ ಬಂದು ಮೂಕರಾಗುವ ಕ್ಷಣ.. ಅಭಿಮಾನಿಯದ್ದು…
ಡಾಲಿ ಧನಂಜಯ್ ‘ಟಗರು’ ಚಿತ್ರದ ನಂತರ ಕನ್ನಡ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಇದೀಗ ಅವರ ಅಭಿನಯದ ‘ಬಡವ ರಾಸ್ಕಲ್’ ಚಿತ್ರವು ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ‘ಬಡವ ರಾಸ್ಕಲ್’ ಸಿನಿಮಾದ ಟ್ರೇಲರ್ (ಡಿಸೆಂಬರ್ 13) ರಿಲೀಸ್ ಆಗಿದ್ದು. ಗೆಳೆಯರಿಗಾಗಿ ಪ್ರಾಣ ಬೇಕಾದರೂ ಕೊಡೋಕೆ ಸಿದ್ಧನಿರುವ ಮಧ್ಯಮ ವರ್ಗದ ಯುವಕನಾಗಿ ಧನಂಜಯ ಮಿಂಚಿದ್ದಾರೆ. ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಧನಂಜಯ್ ಆಟೋ ಡ್ರೈವರ್ ಆಗಿ ಕಾಣಿಸಿಕೊಡಿದ್ದಾರೆ. ಟ್ರೇಲರ್ ರಿಲೀಸ್ ಆದ ನಂತರದಲ್ಲಿ ಈ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಗಳು ದುಪ್ಪಟ್ಟಾಗಿವೆ.
ಇತ್ತೀಚೆಗೆ ‘ಬಡವ ರಾಸ್ಕಲ್’ ಚಿತ್ರಕ್ಕೆ ಹೊಸ ರೀತಿಯಲ್ಲಿ ಅಭಿಮಾನಿಗಳು ಪ್ರೋತ್ಸಾಹ ನೀಡಿ ಸ್ವಯಂಪ್ರೇರಿತರಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಈ ಬಗ್ಗೆ ಧನಂಜಯ್ ಇನ್ ಸ್ಟಾಗ್ರಾಮ್ ನಲ್ಲಿ ಹಲವಾರು ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ.
ಶಾಲಾ ಮಕ್ಕಳಿಂದ ಹಿಡಿದು ತರಕಾರಿ ಅಂಗಡಿ, ಮಾಂಸದ ಅಂಗಡಿ, ದಿನಸಿ ಅಂಗಡಿ, ಆಸ್ಪತ್ರೆ ರಶೀದಿ ಚೀಟಿ, ಕಾರು ಗ್ಯಾರೇಜ್, ಆಟೋ ಚಾಲಕರವರೆಗೂ ಬಹಳ ವರ್ಗಗಳಲ್ಲಿ ದುಡಿಯುವ ಅಭಿಮಾನಿಗಳು ‘ಬಡವ ರಾಸ್ಕಲ್’ ಚಿತ್ರಕ್ಕೆ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ.’ಡಾಲಿ ಪಿಕ್ಚರ್’ ಬ್ಯಾನರ್ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.
ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ‘ಮಠ’ ಗುರುಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಕತೆಗೆ ತಿರುವು ಕೊಡುವ ಪಾತ್ರ ಇದಾಗಿದ್ದು, ಚಿತ್ರದಲ್ಲಿನ ಅವರ ಗೆಟಪ್ ಈ ಹಿಂದೆ ರಿವೀಲ್ ಆಗಿತ್ತು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
‘ಬಡವ ರಾಸ್ಕಲ್’ ಚಿತ್ರಕ್ಕೆ ಪ್ರೀತ ಜಯರಾಮನ್ ಛಾಯಾಗ್ರಹಣ, ನಿರಂಜನ್ ದೇವರಮನೆ ಸಂಕಲನ ಹಾಗೂ ವಿನೋದ್ ಸಾಹಸ ನಿರ್ದೇಶನವಿದ್ದು, ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ನಡೆದಿದೆ. ಡಿಸೆಂಬರ್ 24 ಕ್ರಿಸ್ಮಸ್ ಹಬ್ಬದಂದು ಚಿತ್ರ ಬಿಡುಗಡೆಯಾಗಲಿದೆ.
****