ಅದಿತಿ ಪ್ರಭುದೇವ ನಟನೆಯ ಆನ ಸಿನಿಮಾ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರ ತಂಡ ಸದ್ಯ ಚಿತ್ರ ರಿಲೀಸ್ ಮಾಡಲು ಸಿದ್ಧವಾಗಿದೆ. ಡಿಸೆಂಬರ್ 17 ಕ್ಕೆ ಆನ ಚಿತ್ರ ಬಿಡುಗಡೆಯಾಗಲಿದ್ದು ಚಿತ್ರತಂಡ ಸಿನಿಮಾದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ
ಮನೋಜ್ ಪಿ ನಡಲುಮನೆ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ಕನ್ನಡದ ಮೊದಲ ಮಹಿಳಾ ಸೂಪರ್ ಹೀರೋ ಚಿತ್ರ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅದಿತಿ ಪ್ರಭುದೇವ ತಮ್ಮ ‘ಆನಾ’ ಸಿನಿಮಾ ಬಗ್ಗೆ ಮಾತನಾಡುವಾಗ ಪುಷ್ಪ ಸಿನಿಮಾ ಕನ್ನಡಕ್ಕೆ ಬರುವುದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತದೆ ಎಂದಿದ್ದಾರೆ.

ಪುಷ್ಪ ಸಿನಿಮಾ ಬಂದರೆ ನಮ್ಮ ಸಿನಿಮಾಗಳಿಗೆ ಥಿಯೇಟರ್ ಸಿಗಲ್ಲ. ನಮ್ಮ ನಾಡಲ್ಲಿ ನಮ್ಮ ಸಿನಿಮಾಗೆ ಹೊಡೆದಾಡಬೇಕು ಎಂದರೆ ವಿಪರ್ಯಾಸ. ಇದು ನಮ್ಮಪ್ಪನ ಮನೆ. ಇಲ್ಲಿರುವುದನ್ನು ತಿನ್ನಲು ಪಕ್ಕದ್ಮನೆ ಅಂಕಲ್ ನ ಕೇಳಬೇಕು. ಇದೆಂಥಾ ದುರಂತ? ಕೇವಲ ಆನಾ ಸಿನಿಮಾ ಅಂತಲ್ಲ, ಎಲ್ಲಾ ಸಿನಿಮಾಗಳನ್ನು ಸೇರಿಸಿ ಹೇಳ್ತಾ ಇದ್ದೀನಿ. ಇದೆಂಥಾ ವಿಪರ್ಯಾಸ’ ಎಂದು ಅದಿತಿ ಪ್ರಭುದೇವ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ನಮ್ಮ ಸಿನಿಮಾಗಳನ್ನು ಪ್ರೋತ್ಸಾಹ ಮಾಡೋಣ ಎಂದು ಮನವಿ ಮಾಡಿದ್ದಾರೆ.
ಆನ ಸಿನಿಮಾ ಡಿಸೆಂಬರ್ 17 ರಂದು ರಿಲೀಸ್ ಆಗಲಿದೆ, ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣ ಪತ್ರ ನೀಡಲಾಗಿದೆ. ತಮ್ಮ ಸಿನಿಮಾದಲ್ಲಿ ಕೇವಲನಾಯಕ-ನಾಯಕಿಯನ್ನು ಹೈಲೈಟ್ ಮಾಡುವುದಲ್ಲ, ತಂತ್ರಜ್ಞರಿಗೆ ಪ್ರಾಮುಖ್ಯತೆ ಇರುವ ಸಿನಿಮಾವಾಗಿದೆ. ಯುಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ಆನದಲ್ಲಿ ಅದಿತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದು, ಉದಯ್ ಲೀಲಾ ಅವರ ಛಾಯಾಗ್ರಹಣವಿದೆ.
****