ಸ್ಯಾಂಡಲ್‌ವುಡ್‌ನ ದೊಡ್ಮನೆ ಅಂತ ಕರೆಸಿಕೊಳ್ಳೊ ಡಾ.ರಾಜ್‌ಕುಮಾರ್ ಅವ್ರ ಕುಟುಂಬಕ್ಕೆ, ಕರ್ನಾಟಕದಲ್ಲಿ ಯಾಕಷ್ಟು ಜನ ಫ್ಯಾನ್ಸ್ ಇದ್ದಾರೆ ಅಂತ, ಇವತ್ತಿನ ಘಟನೆಯನ್ನ ನೋಡಿದ ಮತ್ತೆ ಮನವರಿಕೆ ಆಗಿರುತ್ತೆ. ಇವತ್ತು ದೂರದ ಧಾರವಾಡದಿಂದ ದೊಡ್ಮನೆ ರಾಜರತ್ನ ಪುನೀತ್ ರಾಜ್ ಕುಮಾರ್ ಪುಣ್ಯಭೂಮಿಯನ್ನ ನೋಡೋಕೆ, ಪುನೀತ್ ರಾಜ್‌ಕುಮಾರ್ ಅವ್ರ ಅಭಿಮಾನಿ ದಾಕ್ಷಾಯಿಣಿ ಸುಮಾರು 500 ಕಿಮಿ ದೂರದಿಂದ ಓಡುತ್ತಾ ಬಂದಿದ್ರು. ದಾಕ್ಷಾಯಿಣಿ ಧಾರವಾಡ ಬಳಿಯ ಮನಗುಂಡಿ ಅನ್ನೋ ಊರಿನಿಂದ ಬರೋಬ್ಬರಿ 14 ದಿನ ಓಡಿಕೊಂಡು ಬಂದಿದ್ರು. ದಾಕ್ಷಾಯಿಣಿ ಅವ್ರ ಇಡೀ ಕುಟುಂಬ ಪುನೀತ್ ರಾಜ್‌ಕುಮಾರ್ ಅವ್ರ ಕಟ್ಟಾ ಅಭಿಮಾನಿಗಳು.
ಮೂರು ಮಕ್ಕಳ ತಾಯಿ ದಾಕ್ಷಾಯಿಣಿಯ ಈ ಸಾಹಸ ಅಭಿಮಾನಕ್ಕೆ ದೊಡ್ಮನೆ ತೋರಿದ ಔದಾರ್ಯ ನಿಜಕ್ಕೂ ಮಾದರಿ. ದಾಕ್ಷಾಯಿಣಿಯವರನ್ನ ಪುಣ್ಯಭೂಮಿಯ ಬಳಿ ಬರಮಾಡಿಕೊಂಡಿದ್ದು ದೊಡ್ಮನೆಯ ಮೊಮ್ಮಗ ಯುವರಾಜ್ ಕುಮಾರ್. ದಾಕ್ಷಾಯಿಣಿ ಮತ್ತವರ ಕುಟುಂಬಕ್ಕೆ ಪುನೀತ್ ರಾಜ್ ಕುಮಾರ್ ಅವ್ರ ಸಮಾಧಿಯ ದರ್ಶನ ಮಾಡಿಸಿ, ಅವ್ರಿಗೆ ಊಟೋಪಚಾರ ನೋಡಿಕೊಂಡ್ರು. ಅವ್ರ ಜೊತೆಗೆ ಸ್ವಲ್ಪ ಹೊತ್ತು ಕಾಲ ಕಳೆದರು. ದಾಕ್ಷಾಯಿಣಿ ಅವ್ರನ್ನ ಸ್ವಾಗತಿಸಲು ರಾಘವೇಂದ್ರ ರಾಜ್‌ಕುಮಾರ್ ಅವ್ರೇ ಬರೋಕೆ ರೆಡಿಯಾಗಿದ್ರು, ಆದ್ರೆ ಆರೋಗ್ಯದ ಕಾರಣ ಅವ್ರ ಬದಲು ಅವ್ರ ಕಿರಿಮಗ ಯುವರಾಜ್‌ಕುಮಾರ್ ಬಂದಿದ್ರು.
ಇದಾದ ಬಳಿಕ ಸಂಜೆಯ ಹೊತ್ತಿಗೆ ದೊಡ್ಮನೆಯ ದೊಡ್ಮಗ ಶಿವಣ್ಣ, ದಾಕ್ಷಾಯಿಣಿ ಮತ್ತವರ ಕುಟುಂಬವನ್ನ ತಮ್ಮ ನಾಗವಾರದ ಮನೆಗೆ ಕರೆಸಿಕೊಂಡರು. ಮನೆಗೆ ಬಂದ ಅಭಿಮಾನಿಯನ್ನ ಆತ್ಮೀಯ ಬಂದುಗಳ ರೀತಿಯಲ್ಲಿ ಸತ್ಕರಿಸಿದ್ರು. ತಮ್ಮ ಮನೆಗೆ ಬಂದ ದೂರದೂರಿನ ಬಂಧುವಿನಂತೆ ಸತ್ಕರಿಸಿ, ಅವರ ಜೊತೆಗೊಂದಿಷ್ಟ ಕಾಲ ಕಳೆದ್ರು. ಇದಕ್ಕಲ್ಲವೇ ದೊಡ್ಮನೆಯನ್ನ ಅಷ್ಟು ಅಭಿಮಾನಿಗಳು ಮನದಲ್ಲಿಟ್ಟು ಆರಾಧಿಸೋದು. ಅಷ್ಟು ದೂರದಿಂದ ಓಡುತ್ತಲೇ ಬಂದ ದಾಕ್ಷಾಯಿಣಿಗೆ ಇದಕ್ಕಿಂತ ಇನ್ನೇನು ಬೇಕು ಹೇಳಿ..?
****