ಮಲೆಯಾಳಂ ನ ‘ದೃಶ್ಯಂ’ ಚಿತ್ರವನ್ನು 2014 ರಲ್ಲಿ ಕನ್ನಡಕ್ಕೆ ‘ದೃಶ್ಯ’ ಎಂದು ರಿಮೇಕ್ ಮಾಡಲಾಗಿತ್ತು. ಈಗ ಮತ್ತದೇ ಜೀತೂ ಜೋಸೆಫ್ ಅವರು ನಿರ್ದೇಶಿಸಿದ ‘ದೃಶ್ಯಂ 2’ ಸಿನಿಮಾವನ್ನು ಕನ್ನಡದಲ್ಲಿ ‘ದೃಶ್ಯ 2’ ಎಂದು ರಿಮೇಕ್ ಮಾಡಲಾಗಿದೆ. ಈ ಚಿತ್ರದಲ್ಲಿನ ದೊಡ್ಡ ಶಕ್ತಿಯೇ ಜೀತೂ ಜೋಸೆಫ್ ಬರೆದಿರುವ ಅದ್ಭುತವಾದ ಕಥೆ.
‘ದೃಶ್ಯ’ ಸಿನಿಮಾದಲ್ಲಿ ಪೊಲೀಸ್ ರಾಣೆಯ ಒಳಗೆ ಹೆಣ ಹೂತಿಡುವ ಮೂಲಕ ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬವನ್ನು ಕಾಪಾಡಿದ್ದ. ಆದರೆ ‘ದೃಶ್ಯ 2’ ಸಿನಿಮಾದಲ್ಲಿ ಆ ಕೇಸ್ ರೀ-ಓಪನ್ ಆಗುತ್ತದೆ. ಈ ಬಾರಿ ರಾಜೇಂದ್ರ ಪೊನ್ನಪ್ಪನಿಗಿಂತಲೂ ಬುದ್ಧಿವಂತಿಕೆಯಿಂದ ಪೊಲೀಸರು ಕೆಲಸ ಮಾಡುತ್ತಾರೆ. ಅದಕ್ಕೆ ಎದುರಾಗಿ ರಾಜೇಂದ್ರ ಪೊನ್ನಪ್ಪ ಬೇರೆ ರೀತಿಯಲ್ಲಿ ಪ್ಲಾನ್ ಮಾಡುತ್ತಾನೆ. ಹಾಗಾದರೆ ಆತ ಈ ಬಾರಿ ಸಿಕ್ಕಿಬೀಳುತ್ತಾನಾ ಅಥವಾ ತಪ್ಪಿಸಿಕೊಳ್ಳುತ್ತಾನಾ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಪೂರ್ತಿ ಸಿನಿಮಾ ನೋಡಬೇಕು.
‘ದೃಶ್ಯ’ ಚಿತ್ರದಲ್ಲೊಂದು ಫ್ಲೇವರ್ ಇತ್ತು. ಅದರ ಕಥಾನಾಯಕನ ಸ್ವಭಾವ ಎಲ್ಲರಿಗೂ ಇಷ್ಟವಾಗುವಂತಿತ್ತು. ಬಾಕಿ ಕಮರ್ಷಿಯಲ್ ಹೀರೋಗಳಂತೆ ಆತ ವರ್ತಿಸುವುದಿಲ್ಲ. ಈಗ ‘ದೃಶ್ಯ 2’ ಸಿನಿಮಾದಲ್ಲೂ ಆ ಗುಣವನ್ನು ಕಾಯ್ದುಕೊಳ್ಳಲಾಗಿದೆ. ಪಾರ್ಟ್ ಒಂದರಲ್ಲಿ ಇದ್ದ ನಿರೂಪಣಾ ಶೈಲಿಯನ್ನೇ ಎರಡನೇ ಪಾರ್ಟ್ನಲ್ಲೂ ಮುಂದುವರಿಸಿರುವುದಕ್ಕೆ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಆಪ್ತವಾಗುತ್ತದೆ.
ರವಿಚಂದ್ರನ್ ಅವರು 7 ವರ್ಷಗಳ ಬಳಿಕ ರಾಜೇಂದ್ರ ಪೊನ್ನಪ್ಪನಾಗಿ ಆ ಪಾತ್ರವನ್ನು ಮತ್ತೊಮ್ಮೆ ಜೀವಿಸಿದ್ದಾರೆ. ಆರೋಹಿ ನಾರಾಯಣ್, ನವ್ಯಾ ನಾಯರ್, ಉನ್ನತಿ, ಆಶಾ ಶರತ್, ಶಿವಾಜಿ ಪ್ರಭು ಮುಂತಾದವರ ಅಭಿನಯ ಕೂಡ ಮೆಚ್ಚುವಂತಿದೆ. ಈ ಬಾರಿ ಸಾಧುಕೋಕಿಲ ಅವರ ಕಾಮಿಡಿ ಸನ್ನಿವೇಶಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಗಂಭೀರ ಕಥೆಯ ನಡುವೆಯೂ ಅವರು ನಗು ಮೂಡಿಸುವಲ್ಲಿ ಯಶಸ್ವಿ ಆಗಿದ್ದಾರೆ. ಚಿತ್ರತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಪ್ರಮೋದ್ ಶೆಟ್ಟಿ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅನಂತ್ ನಾಗ್ ಅವರ ಪಾತ್ರ ಕೂಡ ಕಥೆಗೆ ಬಹುಮುಖ್ಯ ತಿರುವು ನೀಡುತ್ತದೆ. ಚಿಕ್ಕ ಪಾತ್ರದಲ್ಲೂ ಸಂಪತ್ ಕುಮಾರ್ ಗಮನ ಸೆಳೆಯುತ್ತಾರೆ.
ಸುರೇಶ್ ಅರಸ್ ಸಂಕಲನ, ಜಿಎಸ್ವಿ ಸೀತಾರಾಮ್ ಛಾಯಾಗ್ರಹಣ, ಅಜನೀಶ್ ಬಿ. ಲೋಕನಾಥ್ ಹಿನ್ನೆಲೆ ಸಂಗೀತದಿಂದಾಗಿ ‘ದೃಶ್ಯ 2’ ಸಿನಿಮಾದ ತಾಂತ್ರಿಕ ಗುಣಮಟ್ಟ ಹೆಚ್ಚಿದೆ. ಪಿ. ವಾಸು ತುಂಬ ಅಚ್ಚುಕಟ್ಟಾಗಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಮಲಯಾಳಂ ಸಿನಿಮಾವನ್ನು ಅವರು ಯಥಾವತ್ತಾಗಿ ಕನ್ನಡಕ್ಕೆ ರಿಮೇಕ್ ಮಾಡಿದ್ದಾರೆ. ಕನ್ನಡದ ಸೊಗಡಿಗೆ ಈ ಕಥೆ ತುಂಬ ಚೆನ್ನಾಗಿ ಹೊಂದಿಕೊಂಡಿದೆ. ಮಲಯಾಳಂ ಅಥವಾ ತೆಲುಗಿನಲ್ಲಿ ಈಗಾಗಲೇ ಬಂದಿರುವ ‘ದೃಶ್ಯಂ 2’ ಚಿತ್ರವನ್ನು ನೋಡದೇ ಇರುವವರಿಗೆ ಕನ್ನಡ ‘ದೃಶ್ಯ 2’ ಸಖತ್ ರೋಚಕ ಅನುಭವ ನೀಡಲಿದೆ.
****