ದುನಿಯಾ ವಿಜಯ್ ಒಂದು ಸಂದರ್ಭಕ್ಕೆ ನಿರ್ದೇಶಕರ ನಟ ಎಂಬ ಮಾತಿಗೆ ಅನ್ವರ್ಥವಾಗಿದ್ದರು, ಅದೇ ಕಾರಣಕ್ಕೆ ಸಾಕಷ್ಟು ಹಿನ್ನಡೆಯನ್ನು ಅನುಭವಿಸಿದರು, ಈ ಗುಣದಿಂದ ವಿಜಯ್ ವೃತ್ತಿ ಬದುಕಿನಲ್ಲಿ ಪ್ಲಸ್ ಮತ್ತು ಮೈನಸ್ ಎರಡನ್ನು ಕಂಡಿದ್ದಾರೆ, ನಂತರ ಎಚ್ಚೆತ್ತ ವಿಜಯ್ ಸಾಕಷ್ಟು ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡಿರುವ ದುನಿಯಾ ವಿಜಯ್ ಸದ್ಯ ‘ಸಲಗ’ ಸಿನಿಮಾದ ಯಶಸ್ಸಿನಲ್ಲಿದ್ದಾರೆ. ಕೋವಿಡ್‌ನ ಎರಡನೇ ಅಲೆಯ ನಂತರ ಬಿಡುಗಡೆಯಾದ ಸಿನಿಮಾಗಳಲ್ಲಿ ಸಕ್ಸಸ್ ರೇಟ್ ಹೆಚ್ಚು ಗಳಿಸಿದ ‘ಸಲಗ’ ಸಿನಿಮಾ ಬಾಕ್ಸ್ ಆಫೀಸ್ ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿತು. ಈ ಸಕ್ಸಸ್ ನನ್ನೊಬ್ಬನದ್ದಲ್ಲ, ಇಡೀ ತಂಡದ್ದು ಎಂದು ಟೀಮ್‌ಗೆ ಕ್ರೆಡಿಟ್ ನೀಡಿರುವ ವಿಜಯ್ ಹೊಸ ಅವಕಾಶಗಳೊಂದಿಗೆ ನಿಂತಿದ್ದಾರೆ.
”ಸಲಗ’ ಸಿನಿಮಾದ ಬಳಿಕ ಸಿನಿಮಾ ಉದ್ಯಮದವರಿಗೆ ಬೇರೆಯದ್ದೇ ರೀತಿಯ ವಿಜಯ್ ಕಾಣುತ್ತಿರಬೇಕೇನೋ ಆದರೆ ನಾನು ಹಳೆಯ ದುನಿಯಾ ವಿಜಯ್, ಹಾಗೆಯೇ ಇದ್ದೇನೆ, ಏನೂ ಬದಲಾವಣೆ ಇಲ್ಲ” ಎಂದಿದ್ದಾರೆ ವಿಜಯ್.
”ಸಲಗ’ ಸಿನಿಮಾದ ಯಶಸ್ಸಿನಿಂದ ಸಾಕಷ್ಟು ಬದಲಾವಣೆಗಳು ಆಗಿವೆ ಎಂಬುದನ್ನು ಒಪ್ಪಿಕೊಳ್ಳುವ ದುನಿಯಾ ವಿಯ್, ”ಸಲಗ’ ಸಿನಿಮಾ ಮೇಕಿಂಗ್‌ನಲ್ಲಿ ನನ್ನ ಜೊತೆಗೆ ನಿಂತ ಪ್ರತಿಯೊಬ್ಬ ಕಲಾವಿದರು, ಲೈಟ್ ಮ್ಯಾನ್, ಮೇಕಪ್ ಮ್ಯಾನ್, ಸಹಾಯಕ ನಿರ್ದೇಶಕರು, ನಿರ್ಮಾಪಕರು ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಇದೇ ತಂಡದ ಜೊತೆಗೆ ಮತ್ತೊಮ್ಮೆ ಕೆಲಸ ಮಾಡಲು ಇಷ್ಟಪಡುತ್ತೇನೆ” ಎಂದಿದ್ದಾರೆ. ”ನಮ್ಮ ನಿರ್ದೇಶಕ ತಂಡದಲ್ಲಿ ಅಭಿ ಎಂಬುವರು ಈಗ ಸ್ವಾತಂತ್ರ್ಯ ನಿರ್ದೇಶಕರಾಗುತ್ತಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿಕೊಂಡರು ವಿಜಯ್.
ತಮ್ಮ ಮುಂದಿನ ಸಿನಿಮಾಕ್ಕೆ ಈಗಾಗಲೇ ಕತೆ ಮಾಡಿಟ್ಟುಕೊಂಡಿದ್ದಾರಂತೆ ವಿಜಯ್, ”ದುನಿಯಾ ವಿಜಯ್ ಸಿನಿಮಾ ಮಾಡುತ್ತಾರೆ ಎಂದರೆ ಅದೇ ರೌಡಿಸಂ ಕತೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಈ ಬಾರಿ ನಾನು ಸ್ವಲ್ಪ ಬೇರೆಯದ್ದೇ ರೀತಿಯ ಕತೆ ಹೇಳಲಿದ್ದೇನೆ. ಮನೊರಂಜನೆ ಜೊತೆಗೆ ಸಮಾಜಕ್ಕೆ ಹತ್ತಿರವಾದ ಕತೆಯನ್ನು ಹೇಳಲಿದ್ದೇನೆ. ಈ ಬಾರಿಯ ಕತೆ ‘ಸಲಗ’ಕ್ಕಿಂತಲೂ ಬಲವಾಗಿದೆ” ಎಂದಿದ್ದಾರೆ. ತಮ್ಮ ನಿರ್ದೇಶನದ ಸಿನಿಮಾಕ್ಕೆ ಹಣ ಹೂಡಲು ನಿರ್ಮಾಪಕರು ಸಿದ್ಧವಾಗಿದ್ದಾರೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದಾರೆ ದುನಿಯಾ ವಿಜಯ್..
****