ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಂದಿನ ಸಿನಿಮಾ ‘ಮಾರ್ಟಿನ್’ಗಾಗಿ ಜಿಮ್ ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ. ಧ್ರುವ ಮಾರ್ಟಿನ್ ಸಿನಿಮಾಗಾಗಿ ದೇಹ ಹುರಿಗೊಳಿಸುತ್ತಿದ್ದು, ಇತ್ತೀಚೆಗೆ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಇನ್ನು, ಮಾರ್ಟಿನ್ ಮೊದಲ ಹಂತದ ಚಿತ್ರೀಕರಣ ನಡೆದಿದ್ದು, ಬಹುಭಾಷಾ ನಟಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಎ.ಪಿ. ಅರ್ಜುನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.
ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಧ್ರುವ ಸರ್ಜಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಭಾರಿ ಗಾತ್ರದ ಡಂಬಲ್ಸ್ ಅನ್ನು ಧ್ರುವ ಸರ್ಜಾ ಸರಾಗವಾಗಿ ಎತ್ತುತ್ತಿದ್ದಾರೆ. ಈಗಾಗಲೇ ಅವರ ತಗೋಳಿನ ಗಾತ್ರ ಹರಿ ಹರೆಯದ ಹುಡುಗಿಯ ಸೊಂಟದ ಗಾತ್ರವನ್ನು ದಾಟಿದೆ, ಎದೆಯಂತೂ ಉಬ್ಬಿ ಬಿಟ್ಟಿದೆ. ‘ಮಾರ್ಟಿನ್’ ನಲ್ಲಿ ಧ್ರುವ ಸರ್ಜಾ ದೈತ್ಯಾಕಾರದಲ್ಲಿ ಕಾಣುವುದಂತೂ ಪಕ್ಕಾ ಎಂಬುದನ್ನು ಈ ವಿಡಿಯೋ ಸಾರಿ ಹೇಳುತ್ತಿದೆ.
ಅಪ್ಪು ನಿಧನದ ಬಳಿಕ ಜಿಮ್ ವರ್ಕೌಟ್ ಬಗ್ಗೆ ಹಲವು ಅಪನಂಬಿಕೆಗಳು, ಅನುಮಾನಗಳು ಯುವಕರಲ್ಲಿ ಉಂಟಾಗಿವೆ. ಜಿಮ್‌ನಲ್ಲಿ ಬೆವರಿಳಿಸುವುದರಿಂದ ಆರೋಗ್ಯ ಸಮಸ್ಯೆ ಕಾಡಬಹುದೆಂಬ ಅನುಮಾನಗಳು ಎದ್ದಿವೆ. ಹೃದಯಾಘಾತದ ಭಯವೂ ಇದೆ. ಈ ಎಲ್ಲ ಅನುಮಾನಗಳ ನಡುವೆ ಜಿಮ್‌ಗೆ ಕಾಲಿಟ್ಟು, ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಧ್ರುವ ಸರ್ಜಾ ವರ್ಕೌಟ್ ಮಾಡಲು ಪರೋಕ್ಷವಾಗಿ ಪ್ರೇರಣೆಯನ್ನೂ ನೀಡಿದ್ದಾರೆ.
‘ಮಾರ್ಟಿನ್’ ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವನ್ನು ಎ.ಪಿ.ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಉದಯ್ ಕೆ ಮೆಹ್ತಾ. ಧ್ರುವ ಸರ್ಜಾರ ‘ಪೊಗರು’ ಸಿನಿಮಾಕ್ಕೂ ಇವರೇ ಬಂಡವಾಳ ಹೂಡಿದ್ದರು. ಸಿನಿಮಾದಲ್ಲಿ ನಾಯಕಿಯಾಗಿ ವೈಭವಿ ಶಾಂಡಿಲ್ಯ ನಟಿಸಲಿದ್ದಾರೆ. ಇದು ಇವರ ಮೂರನೇ ಕನ್ನಡ ಸಿನಿಮಾ, ಶರಣ್-ಚಿಕ್ಕಣ್ಣ ನಟಿಸಿದ್ದ ‘ರಾಜ್-ವಿಷ್ಣು’ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಗಾಳಿಪಟ 2’ ನಲ್ಲಿ ನಟಿಸಿದ್ದಾರೆ. ಇದೀಗ ‘ಮಾರ್ಟಿನ್’ನಲ್ಲಿ ನಟಿಸಲಿದ್ದಾರೆ. ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾದ ಬಳಿಕ ‘ದುಬಾರಿ’ ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದಾರೆ.
****