ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ವಿಕ್ರಾಂತ್ ರೋಣ. ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಚಿತ್ರದ ಕುರಿತು ಸಿನಿ ಪ್ರೇಮಿಗಳಲ್ಲಿ ಒಂದು ವಿಶೇಷವಾದ ಆಸಕ್ತಿ ಇದೆ. ಇದಕ್ಕೆ ಕಾರಣ ಸಿನಿಮಾದ ಮೇಕಿಂಗ್.
ಹೌದು..! ವಿಕ್ರಾಂತ್ ರೋಣ ಸಿನಿಮಾವನ್ನು ಅನೂಪ್ ಭಂಡಾರಿ ತುಂಬಾ ಮುತುವರ್ಜಿ ವಹಿಸಿ ತೆಗೆಯುತ್ತಿದ್ದಾರೆ. ಹಾಗೇ ಪ್ಯಾನ್ ಇಂಡಿಯಾ ಸಿನಿಮಾ ಕೂಡ. ಹೀಗಾಗಿ ಸಿನಿಮಾದ ಮೇಲೆ ಒಂದಿಷ್ಟು ನಿರೀಕ್ಷೆಗಳಿದ್ದವು. ಆದ್ರೆ ಆ ನಿರೀಕ್ಷೆಗಳನ್ನ ಹಿಮಾಲಯದಷ್ಟು ಮಾಡಿದ್ದು, ಸಿನಿಮಾ ಪೋಸ್ಟರ್ ಗಳು ಮತ್ತು ಟೀಸರ್ ಗಳು.
ಅದರಲ್ಲೂ ಸಿನಿಮಾದ ಟೈಟಲ್ ಲೋಗೋ ಟೀಸರನ್ನು ವಿಶ್ವದ ಅತಿ ಎತ್ತರದ ಕಟ್ಟಡ ದುಬೈನ ಬುರ್ಜ್ ಖಲೀಫಾದಲ್ಲಿ ಲಾಂಚ್ ಮಾಡಿದ್ದು, ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಹೀಗಾಗಿ ವಿಕ್ರಾಂತ್ ರೋಣ ಸಿನಿಮಾ ಯಾವಾಗ ಬಿಡುಗಡೆಯಾಗುತ್ತೆ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯ್ತಾಯಿದ್ದಾರೆ. ಈಗಾಗಲೇ, ವಿಕ್ರಾಂತ್ ರೋಣ ಚಿತ್ರದ ಪ್ರಚಾರ ಜೋರಾಗಿ ಶುರುವಾಗಿದೆ.
ರಿಲೀಸ್ ಡೇಟ್ ಅನೌನ್ಸ್ ಮಾಡಲು ‘ವಿಕ್ರಾಂತ್ ರೋಣ’ ತಂಡ ಒಂದು ಟೀಸರ್ ಬಿಡುಗಡೆ ಮಾಡಿದೆ. ಕಿಚ್ಚ ಸುದೀಪ್ ಅವರು ಬೈಕ್ ಏರಿ ಖಡಕ್ ಪೋಸ್ ನೀಡಿದ್ದಾರೆ. ದಟ್ಟ ಕಾನನದ ಹಿನ್ನೆಲೆಯಲ್ಲಿ ಈ ಕಥೆ ಸಾಗಲಿದೆ ಎಂಬುದನ್ನು ಈ ಟೀಸರ್ ಸಾರಿ ಹೇಳುತ್ತಿದೆ. ‘2022ರ ಫೆ.24ರಂದು ಈ ಜಗತ್ತಿಗೆ ಹೊಸ ಹೀರೋ ಸಿಗಲಿದ್ದಾನೆ’ ಎಂಬ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ.
ಹಲವು ಕಾರಣಗಳಿಂದಾಗಿ ಈ ಸಿನಿಮಾ ಕೌತುಕ ಮೂಡಿಸಿದೆ. ಕಾಡಿನ ಸೆಟ್ ಹಾಕಿ ಬಹುತೇಕ ದೃಶ್ಯಗಳನ್ನು ಶೂಟ್ ಮಾಡಲಾಗಿದೆ. 3ಡಿ ಅವತರಣಿಕೆಯಲ್ಲಿ ‘ವಿಕ್ರಾಂತ್ ರೋಣ’ ರಿಲೀಸ್ ಆಗಲಿರುವುದು ಕೂಡ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ ಕೂಡ ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ನಟಿ ನೀತಾ ಅಶೋಕ್ ಅವರು ಪಾತ್ರವೂ ಗಮನ ಸೆಳೆಯಲಿದೆ. ವಿಶೇಷ ಎಂದರೆ, ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಒಂದು ಸ್ಪೆಷಲ್ ಸಾಂಗ್ನಲ್ಲೂ ಅವರು ಡ್ಯಾನ್ಸ್ ಮಾಡಿದ್ದಾರೆ. ಅವರ ಪಾತ್ರಕ್ಕೆ ಗಡಂಗ್ ರಕ್ಕಮ್ಮ ಎಂದು ಹೆಸರು ಇಡಲಾಗಿದೆ. ಹೀಗೆ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿವೆ.
ಇದೀಗ ಸಿನಿಮಾ ರಿಲೀಸ್ ಬಗ್ಗೆ ಕಿಚ್ಚ ಸುದೀಪ್ ಮಾಹಿತಿ ನೀಡಿದ್ದಾರೆ. ನೆನ್ನೆ(ಡಿ.6) ಕಿಚ್ಚ ಸುದೀಪ್ ಅವರು ಇಂದು ಸಿನಿಮಾದ ಡೇಟ್ ರಿವೀಲ್ ಮಾಡೋದಾಗಿ ತಿಳಿಸಿದ್ರು. ಅಂತೆಯೇ ಸಿನಿಮಾ ರಿಲೀಸ್ ಡೇಟ್ ತಿಳಿಸಿದ್ದಾರೆ. ಟ್ವೀಟ್ ಮಾಡಿರೋ ಕಿಚ್ಚ ಸುದೀಪ್ ಅವರು ಪುಟ್ಟದಾದ ವಿಡಿಯೋ ಹಂಚಿಕೊಂಡಿದ್ದಾರೆ.. ಈ ವಿಡಿಯೋದಲ್ಲಿ ತಿಳಿಸಿರುವಂತೆ ಸಿನಿಮಾ 2022 ರ ಫೆಬ್ರವರಿ 24ರಂದು ಥಿಯೇಟರ್ ಗೆ ಲಗ್ಗೆ ಇಡಲಿದೆ.. ಅಲ್ಲದೇ ‘ಫೆಬ್ರವರಿ 24, 2022 ಕ್ಕೆ ಪ್ರಪಂಚಕ್ಕೆ ಹೊಸ ಹೀರೋ ಸಿಗಲಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.
****