23.8 C
Bengaluru
Thursday, December 8, 2022
spot_img

ನಿರ್ಗಮಿಸಿದ ಮತ್ತೋರ್ವ ಕಲಾತಪಸ್ವಿ- ‘ಶಿವರಾಂ’

ಕನ್ನಡ ಚಿತ್ರರಂಗದ ಮತ್ತೊಂದು ತಾರೆ ತನ್ನ ಇಹಲೋಕ ಪಯಣ ಮುಗಿಸಿದೆ. ತಾರೆ ಅಥವಾ ಸ್ಟಾರ್ ಎಂದರೆ ಕೇವಲ ನಾಯಕ ನಟರಿಗೆ ಮಾತ್ರವೇ ಅನ್ವಯಿಸುವ ಸಂದರ್ಭದಲ್ಲಿ ಇಂದು ನಮ್ಮನ್ನಗಲಿರುವ ಹಾಸ್ಯ ನಟ, ಪೋಷಕ ನಟ ಮತ್ತು ಕಲಾವಿದ ಎಸ್ ಶಿವರಾಂ ಅವರನ್ನು ಸಹ ತಾರೆ ಎಂದು ಸಂಬೋಧಿಸುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಶ್ರೀಯುತ ಶಿವರಾಂ ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರು.ತಮ್ಮ 84 ನೆಯ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ನಿಧನರಾಗಿದ್ದಾರೆ. ಶಿವರಾಂ ಅವರ ಸಾವಿನೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ಪೀಳಿಗೆಯ ಮತ್ತೊಂದು ಕೊಂಡಿ ಕಳಚಿದಂತಾಗಿದೆ. ಪುನೀತ್ ರಾಜಕುಮಾರ್ ಅವರ ನಿರ್ಗಮನದ ಒಂದು ತಿಂಗಳೊಳಗೆ ಮತ್ತೋರ್ವ ಕಲಾವಿದರು ನಿರ್ಗಮಿಸಿರುವುದು ಕನ್ನಡ ಚಿತ್ರರಂಗಕ್ಕೆ ಆಘಾತ ಉಂಟುಮಾಡಿರುವುದು ಸಹಜ.

ಶ್ರೀಯುತ ಎಸ್ ಶಿವರಾಂ ಮೂಲತಃ ರಂಗಭೂಮಿ ನಟರು. ಚಿತ್ರರಂಗ ಪ್ರವೇಶ ಮಾಡಿದ್ದು ಓರ್ವ ಸಹ ನಿರ್ದೇಶಕರಾಗಿ, ನಿರ್ಮಾಪಕರಾಗಿ ನಂತರ ನಟರಾಗಿ. 1938ರ ಜನವರಿ 28 ರಂದು ಬೆಂಗಳೂರಿನ ಚೂಡಸಂದ್ರದಲ್ಲಿ ಜನಿಸಿದ ಶಿವರಾಂ ತಮ್ಮ ಚಿತ್ರರಂಗದ ಪಯಣ ಆರಂಭಿಸಿದ್ದು ೧೯೫೮ರಲ್ಲಿ ಸಹನಿರ್ದೇಶಕರಾಗಿ. ಆರು ದಶಕಗಳ ತಮ್ಮ ಪಯಣದಲ್ಲಿ ಆರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶಿವರಾಂ ಎಲ್ಲ ರೀತಿಯ ಪಾತ್ರಗಳಲ್ಲೂ ತಮ್ಮ ಕಲಾ ಪ್ರತಿಭೆಯನ್ನು ಹೊರಗೆಡಹಿದ್ದಾರೆ.

ತಮ್ಮ ಸಹೋದರ ರಾಮನಾಥನ್ ಅವರೊಡನೆ ಸೇರಿ ರಾಶಿ ಸೋದರರ ಲಾಂಛನದಲ್ಲಿ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ಬರೀ ಕನ್ನಡ ಅಷ್ಟೆ ಅಲ್ಲದೇ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲೂ ಶಿವರಾಮ್​ ಅವರ ಕೊಡುಗೆ ಅಪಾರ. ಮೂವರು ಸೂಪರ್​ ಸ್ಟಾರ್​​ಗಳನ್ನು ಒಂದೇ ಸಿನಿಮಾದಲ್ಲಿ ಕಾಣುವಂತೆ ಮಾಡಿದ್ದರು. ಆಗಿನ ಕಾಲದಲ್ಲಿ ಈ ಮೂರು ಸೂಪರ್​ ಸ್ಟಾರ್​​ಗಳನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದು ಸುಲಭದ ಮಾತಲ್ಲ. ನಟ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ರಜನೀಕಾಂತ್ ಅವರು ‘ಗಿರಫ್ತಾರ್’ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಮೂವರು ಒಂದೆ ತೆರೆ ಮೇಲೆ ಕಾಣಿಸಿಕೊಂಡಿದ್ದು ಅದೇ ಮೊದಲು, ಅದೇ ಕೊನೆ. ಇದರ ಸಂಪೂರ್ಣ ಕ್ರೆಡಿಟ್ ರಾಶಿ ಬ್ರದರ್ಸ್ ಪ್ರೊಡಕ್ಷನ್ ಹೌಸ್‌ಗೆ ತಲುಪುತ್ತದೆ. ಇದು ನಿಜಕ್ಕೂ ದಾಖಲೆಯ ವಿಷಯ. ಶಿವರಾಂ ಪೂರ್ಣ ಪ್ರಮಾಣ ಪೋಷಕ ನಟರಾಗಿ ಪ್ರವೇಶಿಸಿದ್ದು 1965ರಲ್ಲಿ ಬೆರೆತ ಜೀವ ಚಿತ್ರದ ಮೂಲಕ. ಹಾಸ್ಯ ನಟರಾಗಿಯೂ ಸಹ ಕೇವಲ ಹಾವಭಾವಗಳ ಮೂಲಕ ಮಾತ್ರವಲ್ಲದೆ ಉತ್ಕೃಷ್ಟ ಭಾವಾಭಿನಯದ ಮೂಲಕವೂ ಶಿವರಾಂ ಕನ್ನಡದ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಹೃದಯ ಸಂಗಮ ನಿರ್ದೇಶಿಸಿದ್ದ ಶಿವರಾಮ್​

1972ರಲ್ಲಿ ತೆರೆ ಕಂಡ ‘ಹೃದಯ ಸಂಗಮ’ ಚಿತ್ರಕ್ಕೆ ಶಿವರಾಮ್​ ನಿರ್ದೇಶನ ಮಾಡಿದ್ದರು. ಎಚ್ ಎನ್ ಮುದ್ದುಕೃಷ್ಣ ಈ ಸಿನಿಮಾ ನಿರ್ಮಾಣ ಮಾಡಿದ್ದರು, ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದರು. ಜಯರಾಮ್, ಲೋಕನಾಥ್, ಅಶ್ವತ್ಥ್, ಪಂಡರಿಬಾಯಿ, ಟಿ ಎನ್ ಬಾಲಕೃಷ್ಣ, ಜಯಕುಮಾರಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. 18 ವಾರಗಳ ಕಾಲ ಈ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಡಾ.ರಾಜ​ಕುಮಾರ್​ ರಾಜಣ್ಣ ಹಾಗೂ ಕುಮಾರ ಎಂಬ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ ಆಗಿನ ಕಾಲದಲ್ಲೇ ದಾಖಲೆಯ ಕಲೆಕ್ಷನ್​ ಮಾಡಿತ್ತು.

1970ರಲ್ಲಿ ಗೆಜ್ಜೆ ಪೂಜೆ, ನಂತರ ಉಪಾಸನೆ, 1979ರಲ್ಲಿ ನಾನೊಬ್ಬ ಕಳ್ಳ ಮುಂತಾದ ಚಿತ್ರಗಳ ನಿರ್ಮಾಪಕರೂ ಆಗಿರುವ ಶಿವರಾಂ, ನಾಗರಹಾವು ಚಿತ್ರದಲ್ಲಿ ನಿರ್ವಹಿಸಿದ ಪಾತ್ರ ಇಂದಿಗೂ ಪ್ರೇಕ್ಷಕರ ಮನಸಲ್ಲಿ ಅಚ್ಚಳಿಯದೆ ಉಳಿದಿದೆ. ಬೆರೆತ ಜೀವ , ಮಾವನ ಮಗಳು (1965), ಲಗ್ನಪತ್ರಿಕೆ 1967, ಶರಪಂಜರ, ಮುಕ್ತಿ, ಭಲೇ ಅದೃಷ್ಟವೋ ಅದೃಷ್ಟ 1971, ನಾಗರ ಹಾವು , ನಾ ಮೆಚ್ಚಿದ ಹುಡುಗ, ಸಿಪಾಯಿರಾಮು, ಹೃದಯಸಂಗಮ 1972, ಶುಭಮಂಗಳ, ಹೊಂಬಿಸಿಲು, ಹೊಸ ಬೆಳಕು, ನಾನೊಬ್ಬ ಕಳ್ಳ, ಹಾಲುಜೇನು, ಶ್ರಾವಣ ಬಂತು , ಗುರುಶಿಷ್ಯರು ಮುಂತಾದ ಚಿತ್ರಗಳಲ್ಲಿನ ಶಿವರಾಂ ಅವರ ಅಭಿನಯ ಕನ್ನಡಿಗರ ಮನಸೂರೆಗೊಂಡಿದೆ. 1980 ರಲ್ಲಿ ತಾವೇ ನಿರ್ಮಿಸಿದ ಡ್ರೈವರ್ ಹನುಮಂತು ಚಿತ್ರದಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿ ತಮ್ಮೊಳಗಿನ ಹಾಸ್ಯ ಕಲಾವಿದನ ಪರಿಚಯ ಮಾಡಿಸಿರುವುದು ಶಿವರಾಂ ಅವರ ಹೆಗ್ಗಳಿಕೆ. ಶರಪಂಜರದ ಅಡುಗೆ ಭಟ್ಟನ ಪಾತ್ರ, ಶುಭಮಂಗಳದಲ್ಲಿ ಅಂಬರೀಶ್ ಅವರೊಟ್ಟಿಗೆ ನೀಡಿದ ಅಭಿನಯ ಅವರನ್ನು ಕನ್ನಡಿಗರ ಮನಸಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲಿಸಿದೆ.

ಕೃಪೆ: ನಾ ದಿವಾಕರ್

Prathidwani

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles