ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಗ್ರಾಮದಲ್ಲಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿಗಳ 37ನೇ ಗುರುವಂದನಾ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ಜರುಗಿತು. ಮಠದಿಂದ ಪ್ರತಿ ವರ್ಷ ಕೊಡಲಾಗುವ ಪ್ರತಿಷ್ಠಿತ ಸಿದ್ಧಶ್ರೀ ಪ್ರಶಸ್ತಿಯನ್ನ ನಟ ಪುನೀತ್ ರಾಜಕುಮಾರ್ ಅವರಿಗೆ ಅವರ ನಿಧನಕ್ಕೂ ಮೊದಲೇ ಕೊಡಲು ನಿರ್ಧರಿಸಲಾಗಿತ್ತು.ಆದರೆ, ಅಪ್ಪು ಅವರ ಅಕಾಲಿಕ ನಿಧನದಿಂದ ಇದೀಗ ಮರಣೋತ್ತರವಾಗಿ ಗುರುವಂದನಾ ಕಾರ್ಯಕ್ರಮದಲ್ಲಿ ದಿ. ಪುನಿತ್ ರಾಜ್ಕುಮಾರ್ ಅವರಿಗೆ ಕುಟುಂಬದವರ ಅನುಪಸ್ಥಿತಿಯಲ್ಲಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಪ್ಪು ಭಾವಚಿತ್ರಕ್ಕೆ ಶಾಲು ಹೊದಿಸಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಜಿಡಗಾ ಮಠದ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯರು, ಈ ಬಾರಿಯ ಸಿದ್ಧಶ್ರೀ ಪ್ರಶಸ್ತಿ ನೀಡಲು ಮೊದಲೇ ನಿರ್ಣಯಿಸಲಾಗಿತ್ತು. ಆದ್ರೆ, ದುರ್ದೈವ ಎನ್ನುವಂತೆ ಅಪ್ಪು ನಮ್ಮನ್ನು ಅಗಲಿ ಬಿಟ್ಟರು. ಅಪ್ಪು ನಮ್ಮಿಂದ ದೂರವಾಗಿಲ್ಲ. ದಾನ, ಧರ್ಮಗಳ ಮೂಲಕ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಎಡಗೈಯಿಂದ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ದಾನ ಮಾಡಿರುವ 21ನೇ ಶತಮಾನದ ದಾನಶೂರ ಕರ್ಣ ನಮ್ಮ ಅಪ್ಪು ಎಂದು ಜಿಡಗಾ ಮಠದ ಶ್ರೀ ಮುರುಘರಾಜೇಂದ್ರ ಶಿವಾಚಾರ್ಯರು ಬಣ್ಣನೆ ಮಾಡಿದರು.
ಕಾರ್ಯಕ್ರಮದಲ್ಲಿ ಗೊಂಬೆ ಹೇಳುತೈತೆ ಹಾಡು ಹಾಡುವ ಮುನ್ನ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಭಾವುಕರಾದರು. ಗೊಂಬೆ ಹೇಳುತೈತೆ ಹಾಡನ್ನು ನಾನು ರಾಜಕುಮಾರ ಅವರಿಗಾಗಿ ಹಾಡಿದ್ದೆ. ಇದೇ ಹಾಡು ಇಂದು ಈ ರೀತಿ ಅಗಲಿದ ಅಪ್ಪು ಅವರಿಗಾಗಿ ಹಾಡುವ ಪ್ರಸಂಗ ಬರಬಹುದೆಂದು ಕಲ್ಪನೆಯೂ ಮಾಡಿರಲಿಲ್ಲ.
ಅಪ್ಪು ನಿಧನರಾದ ನಂತರ ಈ ಹಾಡು ಅಪ್ಪು ಅವರಿಗಾಗಿ ವೇದಿಕೆ ಮೇಲೆ ಇದೇ ಮೊದಲ ಬಾರಿಗೆ ಹಾಡುತ್ತಿರುವುದು. ದಾನ, ಧರ್ಮಗಳ ಮೂಲಕ ಸಮಾಜ ಕಾರ್ಯಗಳ ಮೂಲಕ ಅಪ್ಪು ಸರ್ ಸದಾ ನಮ್ಮೊಂದಿಗೆ ಇದ್ದಾರೆ ಎಂದು ವಿಜಯ್ ಪ್ರಕಾಶ್ ಭಾವುಕರಾಗಿ ನುಡಿದರು. ಖ್ಯಾತ ಗಾಯಕ ವಿಜಯ್ ಪ್ರಕಾಶ್, ಲಕ್ಷ್ಮಿ ನಾಗಾರಾಜ್, ನಿರೂಪಕಿ ಅನುಶ್ರೀ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಜಿಡಗಾ ಮಠದ ಭಕ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
****