ಕಾರಿನಲ್ಲಿ ಹೋಗುತ್ತಿರುವ ಸಂದರ್ಭ ಗಾಯಗೊಂಡಿದ್ದ ಶಿವರಾಮ್ ಅವರನ್ನು ಹೊಸಕೆರೆ ಹಳ್ಳಿಯ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಮೂರು ದಿನದ ಬಳಿಕ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು ಅವರ ದೇಹ ಪರಿಸ್ಥಿತಿ ಈಗ ಗಂಭೀರವಾಗಿದೆ ಎನ್ನಲಾಗುತ್ತಿದೆ. ಶಿವರಾಮ್ ಅವರಿಗೆ ಮೆದುಳಿನ ರಕ್ತಸ್ರಾವ ಆಗಿದೆ ಎಂದು ಹೇಳಲಾಗುತ್ತಿದೆ. ವೈದ್ಯರು ಹೇಳಿರುವಂತೆ ಶಿವರಾಮ್ ಸ್ಥಿತಿ ಚಿಂತಾಜನಕವಾಗಿದೆ.
ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಟ ಶೀವರಾಮ್ ಪುತ್ರ ರವಿಶಂಕರ್, ”ಕೆಲವು ದಿನಗಳ ಹಿಂದೆ ಕಾರ್ ಅಪಘಾತದಲ್ಲಿ ಸಣ್ಣ ಗಾಯವಾಗಿತ್ತು. ಅವರಿಗೆ ಚಿಕಿತ್ಸೆ ಕೊಡಿಸಿದ್ದೆವು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮನೆಯಲ್ಲಿ ಅಯ್ಯಪ್ಪನ ಪೂಜೆ ಸಹ ನಡೆಯುತ್ತಿತ್ತು. ಈ ವೇಳೆ ಏನೋ ಕೆಲಸ ಮಾಡಲು ಹೋಗಿ ಬಿದ್ದ ಕಾರಣ ಮತ್ತಷ್ಟು ಪೆಟ್ಟಾಗಿತ್ತು” ಎಂದಿದ್ದಾರೆ.
‘ಬಿದ್ದ ಬಳಿಕ ಆಸ್ಪತ್ರೆಗೆ ಕರೆತಂದೆವು, ಅವರ ಸ್ಕ್ಯಾನಿಂಗ್ ಮಾಡಲಾಯ್ತು. ಆಗ ಮೆದುಳಿನ ರಕ್ತಸ್ರಾವ ಆಗಿರುವುದು ಗೊತ್ತಾಯಿತು. ನಂತರ ಅಪ್ಪನಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದರು. ಆದರೆ ವಯಸ್ಸು ಹೆಚ್ಚಾಗಿರುವ ಕಾರಣ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲವೆಂದು ಈಗ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ” ಎಂದಿದ್ದಾರೆ ಶಿವರಾಮ್ ಪುತ್ರ ರವಿಶಂಕರ್. ಶಿವರಾಮ್ ಅವರಿಗೆ ಮೆದುಳಿನ ರಕ್ತಸ್ರಾವ ಆಗಿದೆ ಎಂದು ಹೇಳಲಾಗುತ್ತಿದೆ. ವೈದ್ಯರು ಹೇಳಿರುವಂತೆ ಶಿವರಾಮ್ ಸ್ಥಿತಿ ಚಿಂತಾಜನಕವಾಗಿದೆ. ಶಿವರಾಮ್ ಅವರಿಗೆ 84 ವರ್ಷ ವಯಸ್ಸು. ಶಿವರಾಮ್ ಆರೋಗ್ಯದ ಬಗ್ಗೆ ಇನ್ನಷ್ಟು ನಿಖರ ಮಾಹಿತಿಗಳು ಲಭ್ಯವಾಗಬೇಕಿವೆ.
ನಟ ಶಿವರಾಮ್ ಅವರು 1965ರಲ್ಲಿ ಬಿಡುಗಡೆಯಾದ ‘ಬೆರೆತ ಜೀವ’ ಸಿನಿಮಾದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದವರು. ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಕನ್ನಡದ ಬಹುತೇಕ ನಾಯಕ ನಟರೊಟ್ಟಿಗೆ ನಟನೆ ಮಾಡಿರುವ ಶಿವರಾಮ್ ಡಾ.ರಾಜ್ಕುಮಾರ್ ನಟಿಸಿರುವ ‘ಹೃದಯ ಸಂಗಮ’ ಸಿನಿಮಾವನ್ನು ನಿರ್ದೇಶನ ಸಹ ಮಾಡಿದ್ದಾರೆ. ಜೊತೆಗೆ ತಮಿಳಿನಲ್ಲಿ ರಜನೀಕಾಂತ್ ನಟಿಸಿದ ಒಂದು ಸಿನಿಮಾ ಸೇರಿದಂತೆ ಒಟ್ಟು ಆರು ಸಿನಿಮಾಗಳನ್ನು ನಿರ್ಮಾಣಸಹ ಮಾಡಿದ್ದಾರೆ ಶಿವರಾಮ್. ಇವರು ಪುಟ್ಟಣ ಕಣಗಾಲ್ ಅವರ ಮೆಚ್ಚಿನ ಶಿಷ್ಯರಾಗಿದ್ದರು ಹಾಗೂ ವಿಷ್ಣುವರ್ಧನ್ ಅವರ ಆಪ್ತ ಗೆಳೆಯರೂ ಆಗಿದ್ದರು
****