ಕಳೆದ ವರ್ಷವೆಲ್ಲಾ ಕೊರೋನಾ ಭಯದಿಂದ ಚಿತ್ರರಂಗ ಸಾಕಷ್ಟು ನಲುಗಿಹೋಗಿತ್ತು. ಆ ಕಾರಣದಿಂದ ಸಿದ್ಧವಾಗಿದ್ದ ಸಿನಿಮಾಗಳು ತೆರೆಗೆ ಬರಲಾಗಲಿಲ್ಲ. ಈ ವರ್ಷ ಬಹುತೇಕ ಸ್ಟಾರ್ ನಟರ ಸಿನಿಮಾಗಳು ತೆರೆಕಾಣುತ್ತಿವೆ. ನಾಳೆಯಿಂದ ಡಿಸೆಂಬರ್ ಪ್ರಾರಂಭವಾಗಲಿದೆ, ವರ್ಷಾಂತ್ಯದ ತಿಂಗಳಿಗೆ ಕಾಲಿಡಲಿದ್ದೇವೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಖುಷಿಯಲ್ಲಿ ದಿನ ಕಳೆಯುತ್ತಿರುತ್ತೇವೆ. ಈ ಮಧ್ಯೆ ಸಿನಿಪ್ರಿಯರಿಗಂತೂ ಭೂರೀ ಭೋಜನವೇ ಕಾದಿದೆ.

ಡಿಸೆಂಬರ್ 3 ರಂದು ಶ್ರೀಮುರುಳಿ, ಆಶಿಕಾ ರಂಗನಾಥ್ ಅಭಿನಯದ ಮದಗಜ ತೆರೆ ಕಾಣ್ತಿದೆ. ಉಮಾಪತಿ ನಿರ್ಮಾಣ, ಮಹೇಶ್ ನಿರ್ದೇಶನದ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಈಗಾಗಲೇ ಓಟಿಟಿಯಲ್ಲಿ ರಿಲೀಸ್ ಆಗಿ ಸಿಕ್ಕಾಪಟ್ಟೆ ಜನಮನ್ನಣೆ ಗಳಿಸಿದ ರತ್ನನ್ ಪ್ರಪಂಚ ಸಿನಿಮಾದ ಹೀರೋ ಡಾಲಿ ಧನಂಜಯ ಮತ್ತೊಮ್ಮೆ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ. ಡಿಸೆಂಬರ್ 24ರಂದು ಅವರ ಅಭಿನಯದ ಬಡವ ರಾಸ್ಕಲ್ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ. ಆದಿನವೇ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಸಿನಿಮಾ ಕೂಡಾ ಬಿಡುಗಡೆ ಆಗಲಿದೆ. ಇವರಿಬ್ಬರಲ್ಲಿ ಜನ ಯಾರ ಪರ ಒಲವು ತೋರುತ್ತಾರೋ ಕಾದುನೋಡಬೇಕಿದೆ.

ಡಿಸೆಂಬರ್ 10ರಂದು ಮೂರು ಸಿನಿಮಾಗಳು ತೆರೆಗೆ ಬರುತ್ತಿವೆ. ಶರಣ್ ನಟನೆಯ ಅವತಾರ ಪುರುಷ, ಅಜಯ್ ರಾವ್, ರಚಿತಾ ರಾಮ್ ಅಭಿನಯದ ಲವ್ ಯೂ ರಚ್ಚು, ರವಿಚಂದ್ರನ್ ಅಭಿನಯದ ‘ದೃಶ್ಯ 2’ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಲಿವೆ.

ಅಕ್ಟೋಬರ್ ಮತ್ತು ನವೆಂಬರ್ ನಲ್ಲೂ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗಿದ್ದವು, ಭಜರಂಗಿ 2, ಕೋಟಿಗೊಬ್ಬ 3, ಸಲಗ ಸೇರಿದಂತೆ ಬಹಳಷ್ಟು ಸಿನಿಮಾಗಳು ಸೂಪರ್ ಹಿಟ್ ಆದವು. ಪ್ರೇಕ್ಷರಿಗೆ ರಸದೌತಣವನ್ನೇ ಬಡಿಸಿದವು. ಆದರೆ ಈಗ ಮತ್ತೆ ಕೊರೋನಾ ಅಲೆ ಪುಟಿದೇಳುವ ಭಯ ಆವರಿಸುತ್ತಿದೆ. ಕೊವಿಡ್ ಪ್ಯಾಂಡಮಿಕ್ ಈಗ ಎಂಡಮಿಕ್ ಆಯ್ತು ಎಂದು ಅಂದುಕೊಳ್ಳುತ್ತಿದ್ದ ಜನರಿಗೆ ಮತ್ತೆ ಕೊವಿಡ್ ಭೀತಿ ಶುರುವಾಗಿದೆ. ಅದ್ಯಾವುದೋ ಹೊಸ ವೈರಸ್ ಆವರಿಸಿಕೊಳ್ತಿದೆ. ಹಾಗಾಗಿ ಮತ್ತೆಲ್ಲಿ ಲಾಕ್ ಡೌನ್ ಘೋಷಣೆ ಆಗಿಬಿಡುತ್ತೋ ಎಂಬ ಟೆನ್ಷನ್ ಚಿತ್ರರಂಗಕ್ಕೆ ಕಾಡುತ್ತಿದೆ. ಹಾಗಾಗಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಿನಿಮಾ ರಿಲೀಸ್ ಮಾಡುವುದೇ ಒಳಿತು ಎಂದು ಮುಂದಿನ ತಿಂಗಳಲ್ಲಿ ತಮ್ಮ ತಮ್ಮ ಚಿತ್ರಗಳನ್ನು ರಿಲೀಸ್ ಮಾಡಲು ಮುಂದಾಗಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಅದು ಒಂದಕ್ಕೊಂದು ಪೈಪೋಟಿ ಕೊಡುವ ಸಿನಿಮಾಗಳು. ಪ್ರೇಕ್ಷಕ ಯಾರ ಕೈಹಿಡಿಯುತ್ತಾನೋ, ಯಾರ ಕೈಬಿಡುತ್ತಾನೋ ಎಂಬ ಭಯ, ನಿರೀಕ್ಷೆ ಸಿನಿಮಂದಿಗೆ. ಅದೇನೇ ಇದ್ದರೂ ವರ್ಷಾಂತ್ಯದಲ್ಲಿ ಸಿನಿ ಪ್ರೇಕ್ಷಕನಿಗೆ ಸಖತ್ ಮನರಂಜನೆ ಸಿಗೋದಂತು ಗ್ಯಾರೆಂಟಿ
****