ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಹಾಗೂ ಮಹೇಶ್ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ‘ಮದಗಜ‘ ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಿದ್ದವಾಗಿರುವ ಬೆನ್ನಲ್ಲೆ, ಮದಗಜ ಚಿತ್ರತಂಡ ದಿಂದ ಭಾರಿ ಸುದ್ದಿ ಹೊರಬಿದ್ದಿದೆ. ಚಿತ್ರದ ಕನ್ನಡದ ಸ್ಯಾಟಲೈಟ್ ಹಕ್ಕು ದೊಡ್ಡ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದೆ.
ಮದಗಜ ಟ್ರೇಲರ್ ಬಿಡುಗಡೆಯಾಗಿ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಚಿತ್ರತಂಡ ಚಿತ್ರವನ್ನು ಡಿಸೆಂಬರ್ 3ರಂದು ಬಿಡುಗಡೆ ಮಾಡುತ್ತೇವೆ ಎಂದು ಅನೌನ್ಸ್ ಕೂಡಾ ಮಾಡಿದೆ ಇದೀಗ ಮದಗಜ ಚಿತ್ರದ ಕನ್ನಡದ ಅವತರಣಿಕೆ ರೂ 6 ಕೋಟಿಗೆ ಕಲರ್ಸ್ ಕನ್ನಡ ನೆಟ್ವರ್ಕ್ ಮದಗಜ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಕೊಂಡುಕೊಂಡಿದೆ. ಕನ್ನಡದ ಸ್ಯಾಟಲೈಟ್ ಹಕ್ಕು ಮತ್ತು ಹಿಂದಿ ಡಬ್ಬಿಂಗ್ ರೈಟ್ಸ್ ಸೇರಿ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಅವರು ದೊಡ್ಡ ಮೊತ್ತವನ್ನೆ ಜೇಬು ತುಂಬಿಸಿಕೊಂಡಿದ್ದಾರೆ.
“ಮದಗಜ”ಹಿಂದಿ ಡಬ್ಬಿಂಗ್ ರೈಟ್ಸ್ 8 ಕೋಟಿಗೆ ಮಾರಾಟ
ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ಹಲವು ಭಾಷೆಗೆ ಡಬ್ ಆಗಿ ಪ್ರಸಾರ ಆಗುತ್ತವೆ. ಇದೇ ಕಾರಣಕ್ಕೆ ಮದಗಜ ಸಿನಿಮಾ ಬಹು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಸಿನಿಮಾ ರಿಲೀಸ್‌ಗೆ ಇನ್ನು 5 ದಿನಗಳು (ಡಿಸೆಂಬರ್ 3) ಬಾಕಿ ಇರುವಾಗಲೇ ದೊಡ್ಡ ಮೊತ್ತ ನಿರ್ಮಾಪಕ ಕೈ ಸೇರಿದೆ. ರಾಬರ್ಟ್ ನಿರ್ಮಾಪಕ ಉಮಾಪತಿ ನಿರ್ಮಿಸಿರುವ ‘ಮದಗಜ’ ಚಿತ್ರದ ಹಿಂದಿ ಭಾಷೆಯ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಮಾತುಕತೆ ಮುಗಿದಿದ್ದು, ದೊಡ್ಡ ಮೊತ್ತವನ್ನೇ ನಿರ್ಮಾಪಕರು ಜೇಬಿಗಿಳಿಸಿಕೊಂಡಿದ್ದಾರೆ ಎನ್ನುತ್ತಿದೆ ಚಿತ್ರತಂಡ.
ಚಿತ್ರತಂಡ ನೀಡುವ ಮಾಹಿತಿ ಪ್ರಕಾರ, ‘ಮದಗಜ’ ಸಿನಿಮಾಗೆ ಹಿಂದಿಗೆ ಭಾರಿ ಬೇಡಿಕೆ ಬಂದಿತ್ತು. ನಿರ್ಮಾಪಕರು ಹಾಗೂ ಕೊಳ್ಳುವವರ ಮಧ್ಯೆ ಹಗ್ಗ ಜಗ್ಗಾಟದಲ್ಲಿ ಒಂದೊಳ್ಳೆ ಮೊತ್ತಕ್ಕೆ ರೈಟ್ಸ್ ಸೇಲ್ ಆಗಿದೆ ಎಂದು ಹೇಳಲಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟಿಸಿದ ಈ ಸಿನಿಮಾವನ್ನು ಹಿಂದಿ ನಿರ್ಮಾಪಕರು ಬರೋಬ್ಬರಿಗೆ 8 ಕೋಟಿ ಕೊಟ್ಟು ಹಕ್ಕುಗಳನ್ನು ಖರೀದಿ ಮಾಡಿದ್ದಾರೆ. ಕೊರೊನಾ ಬಳಿಕ ಕನ್ನಡ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ನೀಡಿದೆ.
ಇತ್ತೀಚೆಗೆ ‘ಮದಗಜ’ ಚಿತ್ರದ ಟ್ರೇಲರ್ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಸಖತ್ ಧೂಳೆಬ್ಬಿಸಿತ್ತು. ಟ್ರೇಲರ್ ನೋಡಿದ ಸಿನಿರಸಿಕರು ‘ಮದಗಜ’ನಿಗೆ ಬಹುಪರಾಕ್ ಎಂದಿದ್ದರು. ಅಲ್ಲದೇ ಟ್ರೇಲರ್‌ನಲ್ಲಿ ಅತಿ ಹೆಚ್ಚು ಆ್ಯಕ್ಷನ್ ದೃಶ್ಯಗಳಿದ್ದು, ಬೃಹತ್ ಸೆಟ್‌ಗಳು ಮತ್ತು ಅದ್ಧೂರಿ ಮೇಕಿಂಗ್ ಎದ್ದು ಕಾಣುತ್ತಿತ್ತು. ಜೊತೆಗೆ ಚಿತ್ರದ ಟೈಟಲ್ ಟ್ರ್ಯಾಕ್ ಹಾಗೂ ಟೈಟಲ್ ಟ್ರ್ಯಾಕ್ ಮೇಕಿಂಗ್ ವಿಡಿಯೋ ಕೂಡಾ ಬಿಡುಗಡೆಯಾಗಿ, ಶ್ರೀಮುರಳಿ ಮಾಸ್ ಲುಕ್‌ನಲ್ಲಿ ಅಬ್ಬರಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಮೊದಲ ಬಾರಿಗೆ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದು, ‘ಮಫ್ತಿ’ ಖ್ಯಾತಿಯ ನವೀನ್ ಕುಮಾರ್ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದ್ದು, ‘ಕೆಜಿಎಫ್’ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜನೆಯಿದೆ.
****