ಅಪ್ಪು ನಮ್ಮನ್ನೆಲ್ಲ ಅಗಲಿ ಇಂದಿಗೆ (ನ.29) ಸರಿಯಾಗಿ ಒಂದು ತಿಂಗಳು ಕಳೆದಿದೆ. ಪ್ರತಿದಿನ ಪುನೀತ್ ಸಮಾಧಿ ದರ್ಶನಕ್ಕೆ ಸಾವಿರಾರ ಜನರು ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಲೇ ಇದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಪುನೀತ್ ಕುಟುಂಬದವರು ಸಮಾಧಿಗೆ ಪೂಜೆ ಮಾಡಿದ್ದಾರೆ. ಅದಕ್ಕಾಗಿ ಬೆಳಗ್ಗೆಯಿಂದಲೇ ಸಕಲ ಸಿದ್ಧತೆ ಮಾಡಕೊಳ್ಳಲಾಗಿತ್ತು. ಅಶ್ವಿನಿ ಪುನೀತ್ ರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಡಾ. ರಾಜ್ ಕುಟುಂಬದ ಎಲ್ಲರೂ ಬಂದು ಅಪ್ಪು ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ನಿಧನರಾಗಿ ಒಂದು ತಿಂಗಳು ಕಳೆದಿರುವ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬರುವ ನಿರೀಕ್ಷೆ ಇದೆ.
ಬೆಂಗಳೂರಿನ ಮೂಡಲಪಾಳ್ಯದ ಪುನೀತ್ ರಾಜಕುಮಾರ್ ಅಭಿಮಾನಿಗಳು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು, ರಾಜರತ್ನನ ನೆನಪಿನಲ್ಲಿ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ, ನೇತ್ರದಾನ ನೊಂದಣಿ ಶಿಬಿರವನ್ನು ಮಾಡಲಾಗಿದೆ. ಅಪ್ಪು ಸ್ಮರಣಾರ್ಥ ಅನೇಕ ಕಡೆಗಳಲ್ಲಿ ಅಭಿಮಾನಿಗಳು ಹಲವು ಸಮಾಜಮುಖಿ ಕಾರ್ಯಗಳನ್ನು ನೆರವೇರಿಸುತ್ತಿದ್ದಾರೆ. ಪುನೀತ್ ನೋಡಿಕೊಳ್ಳುತ್ತಿದ್ದ ‘ಪಿಆರ್ಕೆ ಪ್ರೊಡಕ್ಷನ್ಸ್’, ‘ಪಿಆರ್ಕೆ ಆಡಿಯೋ’, ‘ಶಕ್ತಿಧಾಮ’ ಮುಂತಾದ ಸಂಸ್ಥೆಗಳ ಜವಾಬ್ದಾರಿಯನ್ನು ಅವರ ಕುಟುಂಬ ನಿಭಾಯಿಸುತ್ತಿದೆ.