ಆಕ್ಟ್-1978 ಚಿತ್ರದಲ್ಲಿ ವಿಶೇಷ ಗೌರವ ಪಾತ್ರದಲ್ಲಿ ಅಭಿನಯಿಸಿದ್ದ ಸಂಚಾರಿ ವಿಜಯ್ ಮತ್ತು ಈ ಚಿತ್ರಕ್ಕೆ ಸಹಾಯ ಮಾಡಿದ್ದ ಪುನೀತ್ ರಾಜಕುಮಾರ್ ಇಬ್ಬರು ನಮ್ಮೊಂದಿಗಿಲ್ಲಾ, ಆಕ್ಟ್-1978 ಸಿನೆಮಾ ಪನೋರಮಾದಲ್ಲಿ ಪ್ರದರ್ಶನವಾಗಿದೆ ಈ ಸಂತಸದ ವೇಳೆಯಲ್ಲಿ ತಮ್ಮ ಇಬ್ಬರು ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಬೇಸರದಲ್ಲಿ ನಿರ್ದೇಶಕ ಮಂಸೋರೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
ಮಂಸೋರೆ ನಿರ್ದೇಶನದ ಆಕ್ಟ್-1978 ಚಿತ್ರ 52 ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪನೋರಮಾ ದಲ್ಲಿ ಪ್ರದರ್ಶನಗೊಂಡಿದೆ. ಆಕ್ಟ್-1978 ಸೇರಿದಂತೆ ಕನ್ನಡದ ಒಟ್ಟು ನಾಲ್ಕು ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿದ್ದವು. ಸಾಗರ ಪುರಾಣಿಕ ನಿರ್ದೇಶನದ ’ಡೊಳ್ಳು’, ಪ್ರವೀಣ ಕೃಪಾಕರ ಅವರ ’ತಲೆದಂಡ’ ಮತ್ತು ಗಣೇಶ ಹೆಗಡೆ ನಿರ್ದೇಶನದ ’ನೀಲಿ ಹಕ್ಕಿ’ ಚಿತ್ರಗಳು ಪ್ರದರ್ಶನಗೊಂಡ ಚಿತ್ರಗಳಾಗಿವೆ.

ನವೆಂಬರ್ 20 ರಿಂದ 28 ರ ವರೆಗೆ ಗೋವಾದ, ಪಣಜಿಯಲ್ಲಿ ಚಲನಚಿತ್ರೋತ್ಸವ ನಡೆದಿದ್ದು ಆಕ್ಟ್-1978 ಸಿನಿಮಾದ ನಿರ್ದೇಶಕರಾದ ಮಂಸೋರೆ ಅವರು ತಮ್ಮ ಆತ್ಮೀಯ ಒಡನಾಡಿ ಸಂಚಾರಿ ವಿಜಯ್ ಮತ್ತು ಪುನೀತ್ ರಾಜಕುಮಾರ್ ಅವರನ್ನು ನೆನೆದು ತಮ್ಮ ಫೇಸ್ ಬುಕ್ ಖಾತೆ ಮೂಲಕ ಭಾವುಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ.
” ಭಾರತ ಸರ್ಕಾರದ ವತಿಯಿಂದ ನಡೆಯುವ ಗೋವಾ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಮ್ಮ ಆಕ್ಟ್-1978 ಸಿನೆಮಾ ಆಯ್ಕೆಯಾಗಿ, ಪ್ರದರ್ಶನಗೊಂಡಿದ್ದು ನನ್ನ ಪಾಲಿಗೆ ಸದಾ ನೆನಪಲ್ಲಿ ಉಳಿಯುವ ಘಟನೆಯಾಗಿದೆ. ಅದು ರಾಷ್ಟ್ರ ಪ್ರಶಸ್ತಿಯಷ್ಟೇ ಗೌರವವಿರುವ ‘ಭಾರತೀಯ ಪನೋರಮಾ’ ವಿಭಾಗಕ್ಕೆ ಆಯ್ಕೆಯಾಗಿದ್ದು, ಅತ್ಯಂತ ಹೆಮ್ಮೆಯ ಕ್ಷಣವಾದರೂ, ಈ ಸಂದರ್ಭದಲ್ಲಿ ಆತ್ಮೀಯ ಗೆಳೆಯ ಸಂಚಾರಿ ವಿಜಯ್ ಇರಬೇಕಿತ್ತು ಎಂಬ ಕೊರಗು ಇನ್ನಿಲ್ಲದಂತೆ ಭಾದಿಸುತ್ತಲೇ ಇದೆ.
ನನ್ನ ಮೊದಲ ‘ಹರಿವು’ ಸಿನೆಮಾವನ್ನು ಚಿತ್ರೋತ್ಸವಗಳಿಗೆ ಕಳಿಸಲು ಆರಂಭಿಸಿದ ಮೊದಲ ಪ್ರಯತ್ನವೇ ಗೋವಾ ಅಂತರ್ರಾಷ್ಟ್ರೀಯ ಚಿತ್ರೋತ್ಸವ. ಅದಕ್ಕೆ ಅರ್ಜಿ ಸಲ್ಲಿಸುವ ಮೊದಲು ಸೆನ್ಸಾರ್ ಮಾಡಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲಾ ಬರೆದರೆ ಅದೇ ಒಂದು ಸಿನೆಮಾ ಕತೆಯಾಗುತ್ತದೆ. ಆದರೆ ಅಂದು ಪ್ರತೀ ಕ್ಷಣದಲ್ಲೂ ನನ್ನ ಜೊತೆಗಿದ್ದವರು ವಿಜಯ್ ಸರ್. ಅಷ್ಟೆಲ್ಲಾ ಹರಸಾಹಸ ಪಟ್ಟು ಸೆನ್ಸಾರ್ ಮಾಡಿಸಿ ಕಳುಹಿಸಿದರೂ ಆಯ್ಕೆಯಾಗಿರಲಿಲ್ಲಾ. ಮುಂದೆ ನಾತಿಚರಾಮಿ ಕಳುಹಿಸಿದೆ, ಅದೂ ಆಯ್ಕೆಯಾಗಿರಲಿಲ್ಲಾ.

ಹತ್ತು ವರ್ಷಗಳಿಂದ ಕಾಣುತ್ತಿದ್ದ ಕನಸೊಂದು ಈಗ ನೆರವೇರಿದೆ. ಆದರೆ ಈ ಖುಷಿಯನ್ನು ಕಾಣಲು ವಿಜಯ್ ಸರ್ ಇಲ್ಲಾ. ಅದರಲ್ಲೂ ಮತ್ತಷ್ಟು ಭಾವುಕನನ್ನಾಗಿಸಿದ್ದು , ಪ್ರದರ್ಶನ ಆರಂಭವಾದಾಗ. ನಮ್ಮ ಸಿನೆಮಾಗೆ ಸಹಾಯ ಮಾಡಿದ್ದಕ್ಕಾಗಿ ಹಾಗೂ ಈ ಸಿನೆಮಾದಲ್ಲಿ ವಿಶೇಷವಾಗಿ ಗೌರವ ಪಾತ್ರದಲ್ಲಿ ನಟಿಸಿದ್ದಕ್ಕಾಗಿ starting titles card ಅಲ್ಲಿ ಪುನೀತ್ ಸರ್ ಹಾಗೂ ವಿಜಯ್ ಸರ್ ಗೆ ಆರಂಭದಲ್ಲೇ ವಿಶೇಷವಾಗಿ ಧನ್ಯವಾದಗಳನ್ನು ತಿಳಿಸಿದ್ದೆವು, ಆದರೆ ಕಾಕತಾಳೀಯವಾಗಿ ಅವರಿಬ್ಬರೂ ಈಗ ನಮ್ಮೊಂದಿಗಿಲ್ಲಾ ಎಂಬ ನೋವು ಮತ್ತಷ್ಟು ಭಾದಿಸುತ್ತದೆ.
“ವಿಜಯ್ ಸರ್, ನನ್ನ ಮುಂದಿನ ಪ್ರತೀ ಕಾರ್ಯದಲ್ಲೂ ಅಪ್ಪನ ಜೊತೆಗೆ ನಿಮ್ಮ ಆಶೀರ್ವಾದವೂ ಇರಲಿ, ನನಗೆ ಸಿಗುವ ಪ್ರತೀ ಗೌರವದಲ್ಲಿ ಅಪ್ಪನ ಜೊತೆಗೆ ನಿಮಗೂ ಪಾಲಿರುತ್ತದೆ.”
‘ಈ ಗೌರವ ನಿಮಗೆ ಅರ್ಪಣೆ Sanchari Vijay ಸರ್’.
//ಮಂಸೋರೆ