ದಿ.ನಟ ಸಂಚಾರಿ ವಿಜಯ್ ಅವರ ಕೊನೆಯ ಚಿತ್ರ” ತಲೆದಂಡ” 52 ನೇ ಅಂತರಾಷ್ಟ್ರೀಯ ಚಿತ್ರೋತ್ಸವ ಪನೋರಮ ವಿಭಾಗದಲ್ಲಿ ಪ್ರದರ್ಶನಗೊಂಡಿದೆ. ಪ್ರಕೃತಿಯ ಮಡಿಲಲ್ಲಿ ಹುಟ್ಟಿ ಬೆಳೆದ ಒಬ್ಬ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಪ್ರಕೃತಿಯನ್ನು ಕಾಣುವಂತೆ, ನಿಸ್ವಾರ್ಥದಿಂದ ಪ್ರೀತಿಸುವಂತೆ ಉಳಿದವರಿಗೆ ಅಂದರೆ ನಮಗೆ ಏಕೆ ಸಾಧ್ಯವಾಗುವುದಿಲ್ಲ? ನಾವೇಕೆ ಅಷ್ಟೊಂದು ಸ್ವಾರ್ಥಿಗಳಾಗುತ್ತೇವೆ? ಇಂಥದೊಂದು ಪ್ರಶ್ನೆಯನ್ನು ಹಿನ್ನೆಲೆಯಾಗಿಟ್ಟುಕೊಂಡೇ ರೂಪುಗೊಂಡದ್ದು ಕನ್ನಡ ಸಿನಿಮಾ ‘ತಲೆದಂಡ’. ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಭಾರತೀಯ ಪನೋರಮದಲ್ಲಿ “ತಲೆದಂಡ” ಚಿತ್ರ ವಿಶೇಷ ಪ್ರದರ್ಶನವಾಗಿದೆ.
DFF ನ ತನುರಾಯ್ ಅವರು ಸರ್ಟಿಫಿಕೇಟ್ ಮತ್ತು ಮೊಮೆಂಟಸ್ ನೀಡುವ ಮುಖಾಂತರ ಚಿತ್ರ ನೆನ್ನೆ ಪ್ರದರ್ಶನವಾಗಿದೆ. ಇದೇ ಸಂದರ್ಭದಲ್ಲಿ ನಿರ್ದೇಶಕ ಪ್ರವೀಣ್ ಕೃಪಾಕರ್ ತಮ್ಮ ಚಿತ್ರದ ಬಗ್ಗೆ ಮಾತನಾಡಿ, ‘ಪ್ರಕೃತಿಯನ್ನು ರಕ್ಷಿಸದೇ ಮರಗಳನ್ನು ಕಡಿಯುತ್ತಾ ನಾವೇ (ಮನುಷ್ಯರು) ನಮ್ಮ ಗೋರಿಯನ್ನು ತೋಡಿಕೊಳ್ಳುತ್ತಿದ್ದೇವೆ’.ನೂರು ವರ್ಷಗಳಲ್ಲಿ ನಾವು ಶೇ. 50 ರಷ್ಟು ಪ್ರಕೃತಿ ಮತ್ತು ಪರಿಸರವನ್ನು ನಾಶಗೊಳಿಸಿದ್ದೇವೆ. ಈ ಮೂಲಕ ಭವಿಷ್ಯದ ತಲೆಮಾರುಗಳನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದೇವೆ. ಒಬ್ಬ ಮನೋಸ್ವಾಸ್ಥ್ಯವಿಲ್ಲದ ವ್ಯಕ್ತಿ 30 ವರ್ಷಗಳಿಂದ ತನ್ನಷ್ಟಕ್ಕೇ ಪರಿಸರ ಸಂರಕ್ಷಣೆಯಲ್ಲಿ ಕ್ರಿಯಾಶೀಲವಾಗಿದ್ದನ್ನು ಕಂಡೇ ಈ ಸಿನಿಮಾ ಮಾಡಿದ್ದೇನೆ. ನನ್ನ ಕಥೆಗೆ ಸ್ಫೂರ್ತಿಯೇ ಸತ್ಯ ಘಟನೆ ಎಂದರು ಪ್ರವೀಣ್ ಕೃಪಾಕರ್.

ಹವಾಮಾನ ವೈಪರೀತ್ಯವನ್ನು ನಾವಿನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಅದು ನಿಜ, ಬರಿಯ ಕಲ್ಪನೆಯಲ್ಲ. ಚಿತ್ರವು ಶೇ. 1 ರಷ್ಟು ಪ್ರೇಕ್ಷಕರಲ್ಲಿ ಪರಿಸರದ ಕುರಿತು ಒಂದಿಷ್ಟು ಅರಿವು ಮೂಡಿಸಿದರೂ ನನ್ನ ಪರಿಶ್ರಮ ಸಾರ್ಥಕ ಎಂದ ಪ್ರವೀಣ್, ಸಂಚಾರಿ ವಿಜಯ್ ಅವರ ಅಗಲಿಕೆಯನ್ನೂ ಸ್ಮರಿಸಿಕೊಂಡರು. ಚಿತ್ರದ ಆರಂಭದಿಂದಲೂ ಕೊನೆವರೆಗೂ ಇದ್ದ ಸಂಚಾರಿ ವಿಜಯ್, ಅದು ತೆರೆ ಕಂಡು ಜನರನ್ನು ತಲುಪುವಾಗ ಇಲ್ಲದಿರುವುದು ಬಹಳ ಬೇಸರದ ಸಂಗತಿ ಎಂದರು.
ನಿರ್ಮಾಪಕಿ ಡಾ. ಹೇಮಮಾಲಿನಿ ಕೃಪಾಕರ್ , ಸಂಕಲನಕಾರ ಕೆಂಪರಾಜ್ , ಹಾಗೂ ನಟಿ ಚೈತ್ರ ಆಚಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಹೆಚ್ಚು ಪ್ರೇಕ್ಷರಿಂದ ತುಂಬಿದ ಚಿತ್ರಮಂದಿರದಲ್ಲಿ ತಲೆದಂಡ ಪ್ರದರ್ಶನಗೊಂಡಿದ್ದು ಚಿತ್ರ ನೋಡಿದ ನಂತರ ಎಲ್ಲರ ಕಣ್ಣಲ್ಲಿ ನೀರು. ಸಂಚಾರಿ ವಿಜಯ್ ನೆನದು ಚಿತ್ರ ತಂಡದವರು ಅಲ್ಲದೆ ಪ್ರೇಕ್ಷಕರ ಕಣ್ಣಾಲಿಗಳು ತೆಲಿದವು ಜೊತೆಗೆ ಚಿತ್ರದ ಅಂತ್ಯ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತು.
ಚಿತ್ರವನ್ನು ಕೃಪಾನಿಧಿ ಕ್ರಿಯೇಷನ್ಸ್ ನಿರ್ಮಿಸಿದ್ದು, ಅಶೋಕ್ ಕಶ್ಯಪ್ ಅವರು ಛಾಯಾಗ್ರಹಣವನ್ನು ಪೂರೈಸಿದ್ದಾರೆ. ಬಿ.ಎಸ್. ಕೆಂಪರಾಜು ಅವರ ಸಂಕಲನವಿದೆ. ಪ್ರವೀಣ್ ಕೃಪಾಕರ್ ಚಿತ್ರ ನಿರ್ದೇಶಕರಾಗಿ, ನಟರಾಗಿ, ಚಿತ್ರಕಥಾ ರಚನಾಕಾರರಾಗಿ ಹಾಗೂ ನಿರ್ಮಾಪಕರಾಗಿರುವವರು. ಜತೆಗೆ ಮೈಸೂರು ವಿಶ್ವವಿದ್ಯಾಲಯದಲ್ಲೂ ಫ್ಯಾಕಲ್ಟಿ ಸದಸ್ಯರಾದವರು.

****