ಬೆನಕ ಅಪ್ಪು ಎಂಬ ಪುನೀತ್ ರಾಜ್‌ಕುಮಾರ್ ಅಭಿಮಾನಿಗೆ ಸುದೀಪ್ ಸಹಾಯ ಮಾಡಿದ್ದು, ಈ ಮೂಲಕ ಸ್ನೇಹಿತನ ಅಭಿಮಾನಿ ಕಷ್ಟವನ್ನು ಕಿಚ್ಚ ಸುದೀಪ್ ಪರಿಹರಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಅಗತ್ಯವಿರುವವರಿಗೆ ಬೇಕಾದ ನೆರವನ್ನು ತಲುಪಿಸುವ ವ್ಯವಸ್ಥೆ ಕೈಗೊಂಡಿದ್ದಾರೆ. ಟ್ರಸ್ಟ್ ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಸುದೀಪ್ ಅಭಿಮಾನಿಗಳ ಸಂಘಗಳು ಕೂಡ ಜನರ ನೆರವಿಗೆ ಧಾವಿಸುತ್ತಾರೆ. ಇದೀಗ ಈ ಟ್ರಸ್ಟ್ ಮೂಲಕ ಪುನೀತ್ ಅಭಿಮಾನಿ ಕಷ್ಟವನ್ನು ಸುದೀಪ್ ಪರಿಹರಿಸಿದ್ದಾರೆ. ಹೌದು! ಬೆನಕ ಅಪ್ಪು ಎಂಬ ಪುನೀತ್ ರಾಜ್‌ಕುಮಾರ್ ಅಭಿಮಾನಿಗೆ ಸುದೀಪ್ ಸಹಾಯ ಮಾಡಿದ್ದು, ಈ ಮೂಲಕ ಸ್ನೇಹಿತನ ಅಭಿಮಾನಿ ಕಷ್ಟವನ್ನು ಕಿಚ್ಚ ಸುದೀಪ್ ಪರಿಹರಿಸಿದ್ದಾರೆ.
ಫೇಸ್ ಬುಕ್ ಪೋಸ್ಟ್ ಮೂಲಕ ಘಟನೆ ವಿವರ ಹಂಚಿಕೊಂಡ ಅಭಿಮಾನಿ:
ಕಳೆದ ಶುಕ್ರವಾರ ನನ್ನ ತಾಯಿ ಹಾಗೂ ನನ್ನ ತಮ್ಮನಿಗೆ ನೆಲಮಂಗಲದ ಬಳಿ ರಸ್ತೆ ಅಪಘಾತದಲ್ಲಿ ತುಂಬಾ ಗಾಯಗೊಂಡು ಶ್ರೇಯಸ್ ಆಸ್ಪತ್ರೆಗೆ ದಾಖಲಾಗಿದರು. ನನ್ನ ತಾಯಿಗೆ ಈ ಅಪಘಾತದಲ್ಲಿ ತಲೆಗೆ ತುಂಬಾ ಪೆಟ್ಟು ಬಿದ್ದಿದ್ದ ಕಾರಣ ಸರ್ಜರಿ ಮಾಡಬೇಕೆಂದು ವೈದ್ಯರು ತಿಳಿಸಿದರು, ಅದಕ್ಕೆ ತುಂಬಾ ಹಣ ಬೇಕಾಗಿರುತ್ತದೆ. ನಾನು ಅಪ್ಪು ಅವರ ದೊಡ್ಡ ಅಭಿಮಾನಿ ಅಪ್ಪು ಅವರು ನನ್ನ ಕುಟುಂಬಕ್ಕೆ ತುಂಬಾ ಸಹಾಯ ಮಾಡುತಿದ್ದರು, ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ನನಗೆ ತಾಯಿಯನ್ನು ಉಳಿಸಿಕೊಳ್ಳುವುದು ಕಠಿಣಕರವಾಗಿತ್ತು.

ಈ ಸಂದರ್ಭದಲ್ಲಿ ನನ್ನ ಸ್ನೇಹಿತ ಅಪ್ಪು ಅವರ ಆತ್ಮೀಯ ಗೆಳೆಯರಾದ ಸುದೀಪ್ ಸರ್ ಬಳಿ ಸಹಾಯ ಕೇಳು ಎಂದು ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷರಾದ ರಮೇಶ್ ಕಿಟ್ಟಿ ಅವರ ದೂರವಾಣಿ ಸಂಖ್ಯೆಯನ್ನು ನೀಡಿದ ಕೂಡಲೇ ನಾನು ರಮೇಶ್ ಕಿಟ್ಟಿ ಸರ್ ಅವರನ್ನು ಸಂಪರ್ಕಿಸಿದೆ. ಅವರು ನನ್ನ ತಾಯಿ ಹಾಗೂ ತಮ್ಮನ ಆರೋಗ್ಯದ ಮಾಹಿತಿ ಪಡೆದು ಕೂಡಲೇ ಸ್ಪಂದಿಸಿ ಆಸ್ಪತ್ರೆಯ ಬಳಿ ಬಂದು ನನ್ನ ತಾಯಿ ಹಾಗೂ ತಮ್ಮನನ್ನು ಮಾತನಾಡಿಸಿ ನನಗೆ ಧೈರ್ಯವನ್ನು ತುಂಬಿ, ತಾಯಿಯ ಆರೋಗ್ಯದ ಸ್ಥಿತಿ ತಿಳಿದುಕೊಂಡು ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಸುದೀಪ್ ಸರ್ ಹಾಗೂ ಅವರ ಚಾರಿಟೇಬಲ್ ಸೊಸೈಟಿ ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು ಎಂದು ಪುನೀತ್ ಅಭಿಮಾನಿ ಬೆನಕ ಅಪ್ಪು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಹಾಸನದ ಬಡ ವಿದ್ಯಾರ್ಥಿಗೆ ಕಾಲೇಜು ಶಿಕ್ಷಣಕ್ಕೆ ಸಹಾಯ ಮಾಡಿದ ಕಿಚ್ಚ:
ಇನ್ನು ಇತ್ತೀಚೆಗೆ, ಗಿರೀಶ್ ಕುಮಾರ್ ಮತ್ತು ಅವರ ಕುಟುಂಬ ಮಳೆಯಿಂದ ರಾಗಿ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಪರೀಕ್ಷಾ ಶುಲ್ಕ ಕಟ್ಟಲಾಗದೆ ಹಾಸನದ ಕಿಚ್ಚ ಸುದೀಪ್ ಅಭಿಮಾನಿಗಳ ಸಂಘವನ್ನು ಗಿರೀಶ್ ಸಂಪರ್ಕ ಮಾಡಿದ್ದರು. ಬಿಎಸ್ಸಿ ನರ್ಸಿಂಗ್ ಓದುತ್ತಿರುವ ಗಿರೀಶ್ ಕುಮಾರ್ಗೆ ಕಾಲೇಜು ಶುಲ್ಕಕ್ಕೆ 21 ಸಾವಿರ ರೂ.ಗಳ ಅಗತ್ಯವಿತ್ತು. ಕುಟುಂಬದ ಕಷ್ಟವನ್ನು ಆಲಿಸಿದ ಸುದೀಪ್ ಟ್ರಸ್ಟ್, ನೆರವಿಗೆ ಮುಂದಾಯಿತು. ಶುಲ್ಕ ಕಟ್ಟದೇ ಪರೀಕ್ಷೆ ಬರೆಯಲಾಗದ ಆತಂಕದಲ್ಲಿದ್ದ ವಿದ್ಯಾರ್ಥಿಯ ಆತಂಕ ದೂರ ಮಾಡಿ, ಚೆಕ್ ಮೂಲಕ ಹಣವನ್ನು ನೀಡಲಾಯಿತು. ಈ ಮೂಲಕ ಕಷ್ಟದಲ್ಲಿದ್ದ ವಿದ್ಯಾರ್ಥಿ ಹಾಗೂ ಕುಟುಂಬಕ್ಕೆ ಸುದೀಪ್ ತಮ್ಮ ಟ್ರಸ್ಟ್ ಮೂಲಕ ಸಹಾಯ ಮಾಡಿದ್ದು, ವಿದ್ಯಾರ್ಥಿಯ ಬದುಕಿಗೆ ಬೆಳಕಾಗಿದ್ದಾರೆ.
****