ನಟ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಹೊತ್ತು ಅಭಿಮಾನಿಯೋರ್ವರು ಶಬರಿಮಲೆ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ. ಪುನೀತ್ ರಾಜಕುಮಾರ್ ಅಭಿಮಾನಿಗಳು ಪುನೀತ್ ರನ್ನು ದೇವರಂತೆ ಕಾಣುತ್ತಿದ್ದಾರೆ. ಅವರಲ್ಲಿದ್ದ ಗುಣಗಳು, ಬಡವರ ಬಗ್ಗೆ ಇದ್ದ ಕಾಳಜಿ ಅವರಿಗೆ ಮಾಡುತ್ತಿದ್ದ ಸಹಾಯವನ್ನು ನಾಡಿನ ಜನ ಎಂದೂ ಮರೆಯಲೂ ಸಾದ್ಯವಿಲ್ಲವೇನೋ.
ಪುನೀತ್ ರಾಜಕುಮಾರ್‌ಗೆ ದೇವರ ಮೇಲೆ ಅಪಾರವಾದ ನಂಬಿಕೆ ಇತ್ತು. ಮಂತ್ರಾಲಯದ ರಾಘವೇಂದ್ರ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದರು. ತಂದೆಯಂತೆಯೇ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿ ಬರುತ್ತಿದ್ದರು. ಶಿವಣ್ಣ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದಾಗ ಅವರೊಂದಿಗೆ ಹಲವು ವರ್ಷ ಪುನೀತ್ ರಾಜಕುಮಾರ್ ಅಯ್ಯಪ್ಪನ ದರ್ಶನ ಪಡೆದು ಬಂದಿದ್ದರು.ಅಪ್ಪು ದೇವರ ಮೇಲೆ ನಂಬಿಕೆ, ಹಿರಿಯರ ಮೇಲೆ ಇಟ್ಟ ಗೌರವ. ಕಿರಿಯರ ಮೇಲೆ ತೋರಿಸುತ್ತಿದ್ದ ಪ್ರೀತಿ ಕಂಡು ಇಡೀ ಕರ್ನಾಟಕ ಅವರ ಅಗಲಿಕೆಗೆ ಕಣ್ಣೀರು ಹಾಕುತ್ತಿದೆ.
ಪುನೀತ್ ರಾಜಕುಮಾರ್ ಅಪಾರ ಅಭಿಮಾನಿ ಬಳಗವನ್ನು ಅಗಲಿ ಇನ್ನೇನು ಒಂದು ತಿಂಗಳು ಸಮೀಪಿಸುತ್ತಿದೆ. ಅಪ್ಪು ಸಾವಿನ ನೋವಿನಿಂದ ಕಂಗಾಲಾಗಿರುವ ಅಭಿಮಾನಿಗಳು ಇಂದಿಗೂ ಸಮಾಧಿಗೆ ಬಂದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಕೆಲವೆಡೆ ಅಭಿಮಾನಿಗಳಿಗೇ ಅಪ್ಪು ನೆನಪಿಗಾಗಿ ಗುಡಿ ಕಟ್ಟಿ ಪೂಜಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ಅಭಿಮಾನಿ ಪುನೀತ್ ಫೋಟೊ ಹಿಡಿದು ಶಬರಿಮಲೆ ಯಾತ್ರೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಇರುಮುಡಿ ಜೊತೆ ಅಪ್ಪು ಫೋಟೋವನ್ನೂ ಹಿಡಿದು ಶಬರಿಮಲೆಯ 18 ಮೆಟ್ಟಿಲೇರಿ, ಅವರು ದೇವಾಲಯದ ಮೆಟ್ಟಿಲುಗಳನ್ನು ಹತ್ತುತ್ತಿರುವ ದೃಶ್ಯಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಅಭಿಮಾನಿಯ ಪ್ರೀತಿ ನೋಡುಗರ ಕಣ್ಣುಗಳನ್ನು ತೇವಗೊಳಿಸಿವೆ.
****