ಎ.ಪಿ. ಅರ್ಜುನ್ ನಿರ್ದೇಶನದ ‘ಕಿಸ್’ ಚಿತ್ರದಲ್ಲಿ ವಿರಾಟ್ ಮತ್ತು ಶ್ರೀಲೀಲಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ನೂರು ದಿನ ಪ್ರದರ್ಶನವನ್ನೂ ಕಂಡಿತ್ತು. ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದಿದ್ದ ವಿರಾಟ್ ಈಗ ಪುನಃ ಎ.ಪಿ. ಅರ್ಜುನ್ ನಿರ್ದೇಶನದ ‘ಅದ್ದೂರಿ ಲವರ್’ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಸದ್ಯದ ಅಪ್ ಡೇಟ್ಸ್ ಎಂದರೆ ‘ಅದ್ದೂರಿ ಲವರ್’ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು ಚಿತ್ರದ ಮುಂದಿನ ಹಂತದ ಶೂಟಿಂಗ್ ಗೆ ತಯಾರಿ ನಡೆಸಿದೆ.
ಅದ್ದೂರಿ ಲವರ್ ಕಮರ್ಷಿಯಲ್, ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾ ಆಗಿದ್ದು ಚಿತ್ರದಲ್ಲಿ ವಿರಾಟ್ ಗೆ ಸಲಗ ಸುಂದರಿ ಸಂಜನಾ ಆನಂದ್ ಜೋಡಿಯಾಗಿದ್ದಾರೆ. ಶಿರಸಿ, ಯಲ್ಲಾಪುರ, ಮುಂತಾದ ಕಡೆಗಳಲ್ಲಿ 15 ದಿನಗಳ ಚಿತ್ರೀಕರಣ ಮುಗಿಸಿದ್ದು, ಕಣ್ಮನ ಸೆಳೆಯುವ ದೃಶ್ಯಗಳನ್ನು ಚಿತ್ರೀಕರಿಸಿದ್ದು ಮುಂದಿನ ಶೂಟಿಂಗೆ ಭರ್ಜರಿ ತಯಾರಿಯನ್ನು ನಡೆಸಿದೆ ಚಿತ್ರತಂಡ.
‘ಅದ್ದೂರಿ ಲವರ್’ ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಬಿಗ್ ಬಜೆಟ್ ಸಿನಿಮಾ ಆಗಲಿದೆ ಎಂದಿದ್ದಾರೆ ಎ.ಪಿ.ಅರ್ಜುನ್. ‘ಸಿನಿಮಾದ ಚಿತ್ರೀಕರಣ ಚಿಕ್ಕಮಗಳೂರು, ಡಾರ್ಜಲಿಂಗ್, ಊಟಿ, ಕೊಡೈಕೆನಾಲ್, ಗೋವಾ ಹೀಗೆ ಹಲವು ಕಡೆ ನಡೆಸಲು ಯೋಜನೆ ರೂಪಿಸಿದೆ ಚಿತ್ರತಂಡ. ವಿದೇಶಗಳಲ್ಲಿ ಹಾಡುಗಳ ಚಿತ್ರೀಕರಣಕ್ಕೂ ಪ್ಲಾನ್ ಮಾಡಲಾಗಿದೆಯಂತೆ. ಸಿನಿಮಾದಲ್ಲಿ ಟ್ರಾವೆಲಿಂಗ್ ಇದೆ. ಹಾಗಾಗಿ ಇದು ದೊಡ್ಡ ಬಜೆಟ್ ಸಿನಿಮಾ ಆಗಲಿದೆ ಎಂದಿದ್ದಾರೆ ಅರ್ಜುನ್.
‘ಅದ್ದೂರಿ ಲವರ್’ ಚಿತ್ರ ಎಪಿ ಅರ್ಜುನ್ ಫಿಲಂಸ್ ಬ್ಯಾನರ್ ನಲ್ಲಿ ತಯಾರಾಗುತ್ತಿದ್ದು, ಎಪಿ ಅರ್ಜುನ್ ಅವರೆ ಆಕ್ಷನ್ ಕಟ್ ಹೇಳುತ್ತಿದ್ದಾರೆ, ಸಂಕೇತ್ ಮೈಸೂರು ಇವರ ಛಾಯಾಗ್ರಹಣವಿದ್ದು, ಕಲಾ ನಿರ್ದೇಶನ ಮೋಹನ್ ಬಿ ಕೆರೆ, ವಸ್ತ್ರ ವಿನ್ಯಾಸ ಸಾನಿಯಾ ಸರ್ದಾರಿಯಾ ಮಾಡಿದ್ದಾರೆ.
****