22.9 C
Bengaluru
Friday, March 24, 2023
spot_img

ಪಿ ಆರ್ ಕೆ ಪ್ರೊಡಕ್ಷನ್ಸ್ ನಿಂದ ಮಹತ್ವದ ಟ್ವೀಟ್!

ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತುಂಬಿದ ಸ್ಥಾನ ಎಂತಹದು ಎಂಬುದು ಅವರಿಲ್ಲದ ಸಮಯದಲ್ಲಿ ತಿಳಿಯುತ್ತಿದೆ ಸ್ಯಾಂಡಲ್ ವುಡ್ ಗೆ ನೀಡಿರುವ ಕೊಡುಗೆ ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ. ಸ್ಯಾಂಡಲ್‌ವುಡ್‌ನ ಹೈವೋಲ್ಟೇಜ್ ಕರೆಂಟ್ ಆಗಿದ್ದವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ತೆರೆಮೇಲೆ ತರಹೇವಾರಿ ಪಾತ್ರಗಳಿಗೆ ಜೀವ ತುಂಬಿ, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿಭಾವಂತ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಹೊಸ ಪ್ರತಿಭೆಗಳಿಗೂ ಮಣೆ ಹಾಕಲು  ಪಿ.ಆರ್.ಕೆ.ಪ್ರೊಡಕ್ಷನ್ಸ್  ಸಂಸ್ಥೆಯನ್ನು ಸ್ಥಾಪಿಸಿದ್ದರು. ಪಿ.ಆರ್‌.ಕೆ.ಪ್ರೊಡಕ್ಷನ್ಸ್ ಮೂಲಕ ಯುವ ಪ್ರತಿಭಾವಂತರಿಗೆ ಅವಕಾಶ ನೀಡುತ್ತಿದ್ದರು ಪುನೀತ್ ರಾಜ್‌ಕುಮಾರ್.

ಪಿ.ಆರ್.ಕೆ.ಪ್ರೊಡಕ್ಷನ್ಸ್‌ನಿಂದ ಉತ್ತಮ ಹಾಗೂ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಪುನೀತ್ ರಾಜ್‌ಕುಮಾರ್ ಹೊಂದಿದ್ದರು. ಹೀಗಿರುವಾಗಲೇ, ನಡೆಯಬಾರದ ದುರ್ಘಟನೆ ನಡೆದೇ ಹೋಯ್ತು. ಅಕ್ಟೋಬರ್ 29 ರಂದು ಪುನೀತ್ ರಾಜ್‌ಕುಮಾರ್ ಹಠಾತ್ ನಿಧನರಾದರು. ತೀವ್ರ ಹೃದಯಾಘಾತ ಹಾಗೂ ಹೃದಯ ಸ್ತಂಭನದಿಂದ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದರು.

ಪಿ.ಆರ್.ಕೆ.ಪ್ರೊಡಕ್ಷನ್ಸ್ 2017ರ ಜುಲೈ 20 ರಂದು ಶುರುವಾಯಿತು. ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಗೊಂಡ ಮೊಟ್ಟ ಮೊದಲ ಸಿನಿಮಾ ‘ಕವಲುದಾರಿ’, ಬಳಿಕ ‘ಮಾಯಾಬಜಾರ್ 2016’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಚಿತ್ರಗಳು ಇದೇ ಪಿ.ಆರ್.ಕೆ.ಪ್ರೊಡಕ್ಷನ್ಸ್‌ನಿಂದ ಬಿಡುಗಡೆ ಆಗಿತ್ತು. ಸದ್ಯ ಪಿ.ಆರ್.ಕೆ.ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’, ‘ಓ2’ ಚಿತ್ರಗಳು ನಿರ್ಮಾಣ ಆಗುತ್ತಿವೆ.

ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಜೊತೆಯಲ್ಲಿ ಇಲ್ಲದೇ ಇದ್ದರೂ, ಅವರ ಸ್ಫೂರ್ತಿಯೊಂದಿಗೆ, ಅಪ್ಪು ಕಂಡಿದ್ದ ಕನಸನ್ನು ನನಸಾಗಿಸಲು ಪಿ.ಆರ್.ಕೆ.ಪ್ರೊಡಕ್ಷನ್ಸ್ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊತ್ತಿದ್ದಾರೆ.

ಪಿ.ಆರ್.ಕೆ.ಪ್ರೊಡಕ್ಷನ್ಸ್ ಟ್ವೀಟ್
ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಇದೇ ಮೊದಲ ಬಾರಿಗೆ ಪಿ.ಆರ್.ಕೆ.ಪ್ರೊಡಕ್ಷನ್ಸ್ ಸಂಸ್ಥೆ ಟ್ವೀಟ್ ಮಾಡಿದ್ದು, ತಮ್ಮ ಸಂಸ್ಥೆಯ ಪ್ರಯಾಣವನ್ನು ಪುನರಾರಂಭಿಸುವುದಾಗಿ ತಿಳಿಸಿದೆ. ‘’ನಮಗೆ ಹಿಂದಿನದನ್ನು ಬದಲಿಸುವುದು ಅಸಾಧ್ಯವಾಗಿದೆ. ಆದರೆ, ಶ್ರೀ ಪುನೀತ್ ರಾಜ್‌ಕುಮಾರ್ ರವರು ನಮಗೆ ನೀಡಿರುವ ಉತ್ಸಾಹ ಮತ್ತ ಸ್ಫೂರ್ತಿಯೊಂದಿಗೆ ಪಿ.ಆರ್.ಕೆ.ಪ್ರೊಡಕ್ಷನ್ಸ್ ಮತ್ತು ಪಿ.ಆರ್‌.ಕೆ.ಆಡಿಯೋದ ಮೂಲಕ ಉಜ್ವಲ ಭವಿಷ್ಯವನ್ನು ರಚಿಸಲು ಎದುರು ನೋಡುತ್ತೇವೆ. ನಮ್ಮ ಈ ಪ್ರಯಾಣವನ್ನು ಪುನರಾರಂಭಿಸುತ್ತಾ ಅವರ ಕನಸುಗಳನ್ನು ನನಸಾಗಿಸುವಲ್ಲಿ ನಿಮ್ಮ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ’’ ಎಂದು ಪಿ.ಆರ್.ಕೆ.ಪ್ರೊಡಕ್ಷನ್ಸ್ ಸಂಸ್ಥೆ ಟ್ವೀಟ್ ಮಾಡಿದೆ.
****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles