ರಮೇಶ್ ಅರವಿಂದ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರವೇ ‘100’. ಅಂತರ್ಜಾಲ, ಸೋಶಿಯಲ್ ಮೀಡಿಯಾಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿದರೆ ವರವಾಗುತ್ತದೆ. ಇಲ್ಲದಿದ್ದರೆ ಖಂಡಿತಾ ಸಮಸ್ಯೆ ತಪ್ಪಿದ್ದಲ್ಲ.
ಅದೇ ಸೋಷಿಯಲ್ ಮೀಡಿಯಾ ಹೆಣ್ಣುಮಕ್ಕಳ ಬದುಕಿಗೆ ಹೇಗೆ ಮಾರಕವಾಗುತ್ತದೆ..? ತಂತ್ರಜ್ಞಾನವನ್ನು ಬಳಸಿಕೊಂಡು ನಯವಂಚಕರು ಮಹಿಳೆಯರ ಖಾಸಗೀ ಬದುಕಿನ ಮೇಲೆ ಯಾವೆಲ್ಲಾ ರೀತಿ ಕಣ್ಣಿಡುತ್ತಾರೆ..? ಏನೆಲ್ಲಾ ಆಟವಾಡುತ್ತಾರೆ..? ಎಂಬೆಲ್ಲಾ ವಿವರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಸಿನಿಮಾವೇ 100. ಸದ್ಯ ಈ ಸಿನಿಮಾವನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ವೀಕ್ಷಿಸಿದ್ದಾರೆ.
ಸಿಓಡಿ ಡಿಜಿ ಅಧಿಕಾರಿಗಳ ಜೊತೆ ಸಿನಿಮಾ ವೀಕ್ಷಣೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. “ಸಿನಿಮಾ ನೋಡಿ ಬಹಳ ಸಂತೋಷವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಯುವ ಜನಾಂಗ ಯಾವ ರೀತಿಯಲ್ಲಿ ಮುಳುಗಿಹೋಗಿರುತ್ತೆ. ಅದರಿಂದ ಏನೆಲ್ಲಾ ಸಮಸ್ಯೆಗಳನ್ನು ಫೇಸ್ ಮಾಡಬೇಕಾಗಿ ಬರುತ್ತದೆ ಎಂಬುದನ್ನು ಈ ಸಿನಿಮಾ ಅಚ್ಚುಕಟ್ಟಗಿ ತೆರೆದಿಟ್ಟಿದೆ. ಬಹಳ ಒಳ್ಳೆಯ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ” ಎಂದು ಹೊಗಳಿದ್ದಾರೆ.
ಸಿನಿಮಾ ಅನ್ನೋದು ಕೇವಲ ಮನರಂಜನೆಯ ಮಾಧ್ಯಮ ಮಾತ್ರವಲ್ಲ. ಸಮಾಜವನ್ನು ತಿದ್ದಿ ತೀಡುವ ಶಕ್ತಿ ಅದಕ್ಕಿದೆ. ಅಪರಾಧ ಜಗತ್ತನ್ನು ಮಟ್ಟ ಹಾಕುವಲ್ಲಿ ಸಿನಿಮಾ ಮಾಧ್ಯಮ ಕೂಡಾ ಬಹಳ ಸಹಕಾರಿಯಾಗಬೇಕು ಎಂದು ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಸೋಶಿಯಲ್ ಮೀಡಿಯಾ ಅನ್ನೋದು ನಿಜಕ್ಕೂ ಒಂದು ವರವಿದ್ದಂತೆ. ಆದರೆ ಅದರ ಅತಿಯಾದ ಬಳಕೆ ಹಾಗೂ ದುರ್ಬಳಕೆಯಿಂದ ಅದು ಶಾಪವಾಗಿ ಪರಿಣಮಿಸಿದೆ. ಇದರ ಬಗ್ಗೆ ಅತ್ಯುತ್ತಮವಾಗಿ ತೋರಿಸುವ ಪ್ರಯತ್ನ 100 ಸಿನಿಮಾದಲ್ಲಾಗಿದೆ ಎಂದು ಸೈಬರ್ ಕ್ರೈಂ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
****