ಪುನೀತ್ ರಾಜಕುಮಾರ್ ತೀರಿಕೊಂಡು 20 ದಿನಗಳು ಕಳೆಯುತ್ತಾ ಬಂದಿವೆ. ಅವರು ತೀರಿಕೊಂಡ ದಿನದಿಂದ ಕರ್ನಾಟಕದ ಮೂಲೆ ಮೂಲೆಯಲ್ಲಿ ಅವರ ಹೆಸರಿನಲ್ಲಿ ಸ್ಮರಣೆ, ಅನ್ನದಾನ, ರಕ್ತದಾನ ಕಾರ್ಯಕ್ರಮಗಳು ನಡೆದಿವೆ. ರಾಜ್ಯದ ಬಹುತೇಕ ಎಲ್ಲ ಊರುಗಳ ಎಲ್ಲ ಬೀದಿಗಳಲ್ಲೂ ನಾಯಕ ನಟ ಅಪ್ಪುವಿನ ನಗುಮುಖದ ಫ್ಲೆಕ್ಸ್ ಗಳು ಕಾಣುತ್ತಿವೆ. ಜನಾನುರಾಗದ ಈ ದಾಖಲೆಯನ್ನು ಯಾರೂ ಅಳಿಸುವುದು ಕಷ್ಟ. ಅಂತಹ ಕಡೆಗಳಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋ ಕಾರಣಕ್ಕೆ ಫೆಕ್ಸ್ ಗಳನ್ನು ಬಳಸಿ ಕಾರ್ಯಕ್ರಮದ ನಂತರ ಆ ಫ್ಲೆಕ್ಸ್ ಗಳನ್ನು ಕಾರ್ಯಕ್ರಮ ನಡೆದ ಅದೇ ರಸ್ತೆಯ ಎಲೆಕ್ಟ್ರಿಕ್ ಕಂಬ, ಇಲ್ಲವೆಂದರೆ ಪೋಲ್ ಗಳಿಗೆ ಫ್ಲೆಕ್ಸ್ ಗಳನ್ನು ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆ ನಗು ಮೊಗ ನಮ್ಮ ಸ್ಮೃತಿ ಪಟಲದಲ್ಲಿ ಅಚ್ಚೊತ್ತಿದೆ.
ಆದರೆ ಕಾಲ ಒಂದಿದೆಯಲ್ಲ. ಅದು ಎಲ್ಲ ನೆನಪುಗಳನ್ನೂ ಅಳಿಸಿಹಾಕುತ್ತದೆ. ಗಾಳಿಮಳೆಗೆ ಸಿಕ್ಕಿ ಈ ಫ್ಲೆಕ್ಸ್‌ಗಳು ಚಿಂದಿಯಾಗಿ, ವಿಕಾರವಾಗಿ ಕಸದ ತಿಪ್ಪೆ ಸೇರದಂತೆ ಮಾಡಲು ನಾವೇನು ಮಾಡಬಹುದು ಎಂಬ ಬಗ್ಗೆ ತಿಪಟೂರಿನ ಶಾಲಾ ಶಿಕ್ಷಕಿ ಸಿ.ಡಿ. ಸುವರ್ಣಾ ಎಂಬುವವರು ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಎಲ್ಲರೂ ಕಾರ್ಯರೂಪಕ್ಕೆ ತರ ಬೇಕಾದ ಸಲಹೆ ಇದು. ಮತ್ತು ನಾವಿಷ್ಟು ಪ್ರೀತಿಸುವ ಅಪ್ಪುವಿನ ಫೋಟೋ ಹರಿದು ಚಿಂದಿಯಾಗಿ ಎಲ್ಲೆಂದರಲ್ಲಿ ಬೀಳುವಂತೆ ಮಾಡುವುದು ಎಷ್ಟು ಸರಿ. ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪುನೀತ್ ಅವರಿಗೆ ಅಗೌರವ ತೋರಿದಂತಾಗುವುದಿಲ್ಲವೆ?

ಹೀಗೆ ಮಾಡಿದರೆ…
ಪುನೀತ್ ರಾಜಕುಮಾರ್ ಅವರ ಫ್ಲೇಕ್ಸ್ ಗಳನ್ನು ಅವು ಹಾಳಾಗುವುದಕ್ಕೂ ಮೊದಲೇ ಅಂದರೆ 21ನೇ ದಿನದಂದು (ನಾಳೆಯೇ) ತೆಗೆದು ಮಡಚಿ ಮನೆಗೆ ಒಯ್ಯಬೇಕು. ಅವುಗಳನ್ನು ಮಕ್ಕಳಿಗೆ ಸ್ಕೂಲ್ ಬ್ಯಾಗ್ , ಹೂ ಕುಂಡ, ಅಂಗಡಿಗಳಿಗೆ ಹೋಗಿ ಬರಲು ಕ್ಯಾರಿ ಬ್ಯಾಗ್ ಮುಂತಾಗಿ ಬಳಸಬಹುದು. ಆಗ ಆ ಮಹಾನ್ ವ್ಯಕ್ತಿಯ ನೆನಪು ನೂರು ದಿನ ಇರುವುದರೊಂದಿಗೆ ಫ್ಲೆಕ್ಸ್ ಹರಿದು, ಚಿಂದಿಯಾಗಿ ಎಲ್ಲೆಂದರಲ್ಲಿ ಬೀಳುವುದು ತಪ್ಪುತ್ತದೆ. ಹೀಗೆ ಮಾಡುವುದು ಪರಿಸರಕ್ಕೂ ದೊಡ್ಡ ಕೊಡುಗೆಯನ್ನು ಕೊಟ್ಟಂತಾಗುತ್ತದೆ ಆ ನಿಟ್ಟಿನಲ್ಲಿ ನಾವು ಪುನೀತರ ಒಳ್ಳೆಯ ಕೆಲಸಗಳನ್ನು ಮುಂದುವರೆಸಿದಂತಾಗುತ್ತದೆ.

(ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಎಲ್ಲೇ ಕಾರ್ಯಕ್ರಮ ನಡೆದು ಫ್ಲೆಕ್ಸ್ ಗಳನ್ನು ಹಾಕಿದರೆ ಅಂತಹಕಡೆಗಳಲ್ಲಿ ಇದೇ ಮಾರ್ಗವನ್ನು ಅನುಸರಿಸಿದರೆ ಪುನೀತ್ ಅವರ ಆದರ್ಶಗಳಿಗೆ ನಿಜವಾಗಿಯೂ ಗೌರವ ಕೊಟ್ಟಂತಾಗುತ್ತದೆ.)
****