ರಿಷಬ್ ಶೆಟ್ಟಿ ಹಾಗೂ ರಾಜ್ ಬಿ. ಶೆಟ್ಟಿ ಕಾಂಬಿನೇಷನ್ನ ‘ಗರುಡಗಮನ ವೃಷಭವಾಹನ’ ನವೆಂಬರ್ 19ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಶಿವ ಮತ್ತು ಹರಿಯಾಗಿ ರಾಜ್ ಶೆಟ್ಟಿ ಮತ್ತು ರಿಷಬ್ ಅವರ ಪರ್ಫಾರ್ಮೆನ್ಸ್ಗೆ ಸಿನಿರಸಿಕರು ಭಲೇ ಅಂದಿದ್ದಾರೆ. ಇದೀಗ ಚಿತ್ರತಂಡ ಚಿತ್ರದ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದು, ಸಂಗೀತ ಪ್ರಿಯರು ಈ ಹಾಡಿಗೆ ಮನಸೋತಿದ್ದಾರೆ. ಲೈಟರ್ ಬುದ್ಧ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಈ ಹಾಡು ರಿಲೀಸ್ ಆಗಿದೆ.
‘ಎಂದೋ ಬರೆದ ಕವಿತೆ ಸಾಲು’ ಎಂಬ ಹಾಡು ಬಿಡುಗಡೆಯಾಗಿದ್ದು, ಪವನ್ ಭಟ್ ಸಾಹಿತ್ಯ ರಚಿಸಿದ್ದಾರೆ. ವಾಸುಕಿ ವೈಭವ್ ಈ ಹಾಡಿಗೆ ದನಿಯಾಗಿದ್ದು, ಮಿದುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಸಂಗೀತ ನಿರ್ದೇಶಕ ಮಿದುನ್ ಅವರಿಗೆ ಈ ಚಿತ್ರ 11ನೇ ಸಿನಿಮಾ. ಸಿನಿಮಾ ನಿರ್ದೇಶಿಸಿ ನಟಿಸಿರುವ ರಾಜ್ ಬಿ. ಶೆಟ್ಟಿ ಅವರ ಜೊತೆ ಈ ಹಿಂದೆ ‘ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ಸಂಗೀತ ನಿರ್ದೇಶನ ಮಾಡಿದ್ದರು. ಹಾಗಾಗಿ ರಾಜ್ ಬಿ. ಶೆಟ್ಟಿ ಜೊತೆ ಮಿದುನ್ ಅವರಿಗೆ ಇದು ಎರಡನೇ ಸಿನಿಮಾ. ಈ ಚಿತ್ರಕ್ಕೆ ಸಂಗೀತ ನೀಡುವುದು ಅತ್ಯಂತ ಸವಾಲಿನ ಕೆಲಸವಾಗಿದ್ದು, ಕೊರೊನಾ ಲಾಕ್ಡೌನ್ ಸಮಯದಲ್ಲೇ ಸಂಗೀತ ಸಂಯೋಜನೆ ನಡೆದಿತ್ತು ಎಂದು ಮಿದುನ್ ಹೇಳಿದ್ದಾರೆ.
****