1996 ರಲ್ಲಿ ತೆರೆ ಕಂಡ “ಜನುಮದ ಜೋಡಿ” ಸಿನಿಮಾವನ್ನ ನೋಡಿ ಮೆಚ್ಚಿಕೊಳ್ಳದ, ಚಿತ್ರದ ಹಾಡುಗಳಿಗೆ ಮನ ಸೋತು ತಲೆದೂಗದ ಸಿನಿ ಪ್ರೇಕ್ಷಕನಿಲ್ಲ . ಆ ಲೆವೆಲ್ ಗೆ ಸಿನಿಮಾ ಮೋಡಿ ಮಾಡಿತ್ತು. ಚಿತ್ರದಲ್ಲಿ ಬರುವ ಜಾತಿ ಪದ್ಧತಿ ವಿರುದ್ದ ತಿರುಗಿ ಬೀಳುವ ನಾಯಕನ ಪಾತ್ರವನ್ನು ಮೆಚ್ಚಿ ಕೆಲವು ಸಂಘ ಸಂಸ್ಥೆಗಳು “ಜನುಮದ ಜೋಡಿ ಚಿತ್ರವ ನೋಡಿ” ಎಂಬ ಕ್ಯಾಂಪೇನ್ ಕೂಡ ಮಾಡಿದ್ರು, ಈ ಸಿನಿಮಾದಿಂದ ಅದೆಷ್ಟೋ ಜನ ಸ್ಪೂರ್ತಿ ಪಡೆದು ಅಂತರ್ ಜಾತಿ ವಿವಾಹಗಳನ್ನು ಮಾಡಿಕೊಂಡ ಉದಾಹರಣೆಗಳಿವೆ ಆ ಮಟ್ಟದ ಹೈಪ್ ಕ್ರಿಯೇಟ್ ಮಾಡಿತ್ತು ಶಿವರಾಜಕುಮಾರ್ ಅಭಿನಯದ ಜನುಮದ ಜೋಡಿ ಸಿನಿಮಾ.

‘ಹ್ಯಾಟ್ರಿಕ್ ಹೀರೋ’ ಶಿವರಾಜಕುಮಾರ್ ಅಭಿನಯದ ಟಾಪ್ 5 ಸಿನಿಮಾಗಳ ಪಟ್ಟಿ ಮಾಡಿದರೆ, ಖಂಡಿತಾ ಅದರಲ್ಲಿ “ಜನುಮದ ಜೋಡಿ” ಚಿತ್ರಕ್ಕೆ ಜಾಗ ಇದ್ದೇ ಇರುತ್ತದೆ. 1996ರ ನವೆಂಬರ್ 15ರಂದು ತೆರೆಕಂಡ ಜನುಮದ ಜೋಡಿ’ಗೆ ಬೆಳ್ಳಿ ಮಹೋತ್ಸವದ ಸಂಭ್ರಮ. ‘ಜನುಮದ ಜೋಡಿ’ ತೆರೆಕಂಡು 25 ವರ್ಷಗಳ ಕಳೆದರೂ, ಸಿನಿಪ್ರಿಯರು ಈಗಲೂ ಆ ಸಿನಿಮಾವನ್ನು ನೆನಪು ಮಾಡಿಕೊಳ್ಳುತ್ತಾರೆ. ಅದರ ಹಾಡುಗಳನ್ನು ಗುನುಗುತ್ತಾರೆ. ಆ ಚಿತ್ರದ ಒಂದಷ್ಟು ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.
ಡಾ. ರಾಜ್ಕುಮಾರ್ ಅವರೊಂದಿಗೆ ‘ಆಕಸ್ಮಿಕ’ದಂತಹ ಹಿಟ್ ಸಿನಿಮಾ ಮಾಡಿದ್ದ ನಿರ್ದೇಶಕ ನಾಗಾಭರಣ, ಶಿವಣ್ಣ ಅವರಿಗಾಗಿ 1996ರಲ್ಲಿ ‘ಜನುಮದ ಜೋಡಿ’ಯನ್ನು ಕೈಗೆತ್ತಿಕೊಂಡಿದ್ದರು. ಈ ಚಿತ್ರಕ್ಕೆ ಸ್ಫೂರ್ತಿ ಗುಜರಾತಿನ ಪನ್ನಲಾಲ್ ಪಟೇಲ್ ಅವರ ‘ಮಲೇಲಾ ಜೀವ್’ ಕಾದಂಬರಿ. ಹಳ್ಳಿಯ ಮುಗ್ಧ ಯುವಕ ಕೃಷ್ಣನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡರೆ, ಮಲಯಾಳಂ ನಟಿ ಶಿಲ್ಪಾ ಚಿಪ್ಪಿ ‘ಜನುಮದ ಜೋಡಿ’ ಮೂಲಕ ಕನ್ನಡಕ್ಕೆ ಎಂಟ್ರಿ ನೀಡಿದ್ದರು. ಆನಂತರ ಅವರು ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಈಗ ಇತಿಹಾಸ.
ಸಿನಿಮಾ ಮಾತ್ರವಲ್ಲದೆ, ಅದರ ಹಾಡುಗಳು ಕೂಡ ದೊಡ್ಡ ಹಿಟ್ ಎನಿಸಿಕೊಂಡಿದ್ದವು. ವಿ. ಮನೋಹರ್ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಸಂಯೋಜನೆಗೊಂಡಿದ್ದವು. ದೊಡ್ಡ ರಂಗೇಗೌಡ, ಬರಗೂರು ರಾಮಚಂದ್ರಪ್ಪ ಹಾಗೂ ವಿ. ಮನೋಹರ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದರು. ‘ದೇಹವೆಂದರೆ ಓ ಮನುಜ..’ ಹಾಗೂ ‘ಜನುಮ ಜೊಡಿ ಆದರೂ..’ ಹಾಡುಗಳನ್ನು ಸ್ವತಃ ಡಾ. ರಾಜ್ಕುಮಾರ್ ಅವರು ಹಾಡಿದ್ದರು. ಪವಿತ್ರಾ ಲೋಕೇಶ್, ಏಣಗಿ ಬಾಳಪ್ಪ, ರಾಜೀವ್, ಹೊನ್ನವಳ್ಳಿ ಕೃಷ್ಣ, ಕರಿಬಸವಯ್ಯ, ಮುಖ್ಯಮಂತ್ರಿ ಚಂದ್ರು ಮುಂತಾದವರು ಪೋಷಕ ಪಾತ್ರಗಳಲ್ಲಿ ಇದ್ದರು. ನಟ ಮಂಡ್ಯ ರಮೇಶ್ ಈ ಸಿನಿಮಾದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟರು.
ನಟಿ ಶಿಲ್ಪಾ ಮೊದಲ ಯತ್ನದಲ್ಲೇ ‘ಅತ್ಯುತ್ತಮ ನಟಿ’ ಫಿಲ್ಮ್ ಫೇರ್ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡರು. ನಿರ್ದೇಶನಕ್ಕಾಗಿ ನಾಗಾಭರಣ, ಸಂಗೀತ ನಿರ್ದೇಶನಕ್ಕಾಗಿ ವಿ. ಮನೋಹರ್ ಹಾಗೂ ನಿರ್ಮಾಣಕ್ಕಾಗಿ ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು. ಕರ್ನಾಟಕ ಸರ್ಕಾರದಿಂದ ಅತ್ಯುತ್ತಮ ಸಂಗೀತ, ಗಾಯನ, ಗೀತ ಸಾಹಿತ್ಯ, ಸ್ಪೆಷಲ್ ಜ್ಯೂರಿ ಪ್ರಶಸ್ತಿಗಳು ‘ಜನುಮದ ಜೋಡಿ’ಗೆ ಸಿಕ್ಕಿದ್ದವು. ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ಮುಂತಾದ ಕಡೆ 1 ವರ್ಷಕ್ಕೂ ಅಧಿಕ ದಿನ ಪ್ರದರ್ಶನ ಕಂಡರೆ, ಬೆಂಗಳೂರಿನ 5ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 25 ವಾರ ಪ್ರದರ್ಶವಾಗಿತ್ತು.
****