ಅಪ್ಪು ನಿಧನರಾಗಿ 17 ದಿನ ಕಳೆದಿದೆ. ಎಷ್ಟೇ ದಿನಗಳು ಉರುಳಿದರೂ ಪುನೀತ್ ಇನ್ನಿಲ್ಲ ಎಂಬ ನೋವು ಮಾತ್ರ ಅಭಿಮಾನಿಗಳ ಎದೆಯಲ್ಲಿ ಕಡಿಮೆ ಆಗುವುದೇ ಇಲ್ಲ. ಇಡೀ ದಕ್ಷಿಣ ಭಾರತದ ಚಿತ್ರರಂಗದವರು ಪುನೀತ್ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಅವರೆಲ್ಲರೂ ಸೇರಿ ಮಂಗಳವಾರ (ನ.16) ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಡಾ. ರಾಜ್‌ಕುಮಾರ್ ಕುಟುಂಬದ ಸದಸ್ಯರ ಜೊತೆಗೆ ದಕ್ಷಿಣ ಭಾರತ ಸಿನಿಮಾರಂಗದ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಲಿದ್ದಾರೆ. ಸುದೀಪ್, ಯಶ್, ಗಣೇಶ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿ ಕನ್ನಡ ಚಿತ್ರರಂಗದ ಎಲ್ಲ ಪ್ರಮುಖ ಕಲಾವಿದರು ಭಾಗಿ ಆಗಲಿದ್ದಾರೆ.
ತಮಿಳು ನಟರಾದ ವಿಶಾಲ್, ರಜನಿಕಾಂತ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ತೆಲುಗು ಕಲಾವಿದರಾದ ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್ ಟಿ ಆರ್, ಪ್ರಭಾಸ್, ರಾಮ್ ಚರಣ್ ಹಾಗೂ ಮಲಯಾಳಂ ನಟ ಮೋಹನ್‌ಲಾಲ್ ಸೇರಿದಂತೆ ಪ್ರಮುಖ ಕಲಾವಿದರು ಭಾಗಿ ಆಗುವ ನಿರೀಕ್ಷೆ ಇದೆ. ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಪ್ರಮುಖ ರಾಜಕೀಯ ಮುಖಂಡರ ಸಹ ಭಾಗಿ ಆಗುವ ಸಾಧ್ಯತೆ ಇದೆ. ಮಂಗಳವಾರ (ನ.16) ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ.
****