ಆ ದೃಶ್ಯ ನೋಡಿದ ಎಂಥವರಿಗೂ ಒಂದು ಕ್ಷಣ ಅಯ್ಯೋ ಅನ್ನಿಸದೆ ಇರದು, ಕಣ್ಣಂಚಿನಲ್ಲಿ ನಮಗೆ ಗೊತ್ತಿಲ್ಲದೆ ಕಣ್ಣ ಹನಿ ಜಿನುಗಿರುತ್ತವೆ, ಹೌದು ಪುನೀತ್ ರಾಜ್ಕುಮಾರ್ ಎಂದರೆ ಎಲ್ಲ ವಯಸ್ಸಿನವರಿಗೂ ಇಷ್ಟ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅವರನ್ನು ಇಷ್ಟಪಡುತ್ತಿದ್ದಾರೆ. ಪುನೀತ್ ಹೃದಯಾಘಾತದಿಂದ ಮೃತಪಟ್ಟ ಘಟನೆಯಿಂದ ಕೋಟ್ಯಂತರ ಜನರಿಗೆ ನೋವಾಗಿದೆ. ಅಪ್ಪು ಅಗಲಿಕೆಯಿಂದ ಅನೇಕ ಹಿರಿಯ ಜೀವಗಳು ಮರುಗುತ್ತಿವೆ. ಅಪ್ಪು ಫೋಟೋ ಮುಂದೆ ಅಜ್ಜಿಯರು ಕಣ್ಣೀರು ಹಾಕುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಕುಕನೂರು ಬಸ್ ನಿಲ್ದಾಣದಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿದೆ. ಬಸ್ ಮೇಲೆ ಅಂಟಿಸಿದ್ದ ಜಾಹೀರಾತಿನಲ್ಲಿ ಇರುವ ಪುನೀತ್ ಫೋಟೋಗೆ ವೃದ್ಧೆಯೊಬ್ಬರು ಮುತ್ತಿಟ್ಟು ಕಂಬನಿ ಸುರಿಸಿದ್ದಾರೆ.
ಪುನೀತ್ ಭಾವಚಿತ್ರಕ್ಕೆ ಅಜ್ಜಿ ಮುತ್ತಿಟ್ಟು ಕಣ್ಣೀರು ಹಾಕುತ್ತಿರುವ ಆ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಆಗಿದೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪುನೀತ್ ಅವರನ್ನು ತಮ್ಮ ಮನೆ ಮಗ ಎಂದೇ ಭಾವಿಸಿದ್ದ ಇಂಥ ಹೃದಯಗಳಿಗೆ ಆಗಿರುವ ಆಘಾತವನ್ನು ಪದಗಳಲ್ಲಿ ವಿವರಿಸಲು ಆಗದು. ಇನ್ನು, ಅಪ್ಪು ಸಮಾಧಿಗೆ ಪ್ರತಿ ದಿನ ಸಾವಿರಾರು ಜನರು ಭೇಟಿ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ನ.16ರಂದು ಚಿತ್ರರಂಗದ ವತಿಯಿಂದ ‘ಪುನೀತ್ ನಮನ’ ಕಾರ್ಯಕ್ರಮ ನಡೆಯಲಿದೆ.
****