‘ಭಜರಂಗಿ 2’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಲಭಿಸುವ ಹಂತದಲ್ಲಿರುವಾಗಲೇ, ಪುನೀತ್ ರಾಜ್ಕುಮಾರ್ ನಿಧನದ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಅಲ್ಲಿಂದ ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣವಾಗಿ ಕಳೆಗುಂದಿದ್ದವು. ಇದೀಗ ಮತ್ತೆ ಚಿತ್ರರಂಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಇಂದು ಹೊಸ ಚಿತ್ರಗಳೂ ಬಿಡುಗಡೆಯಾಗಿವೆ. ಈ ಮಧ್ಯೆ ‘ಭಜರಂಗಿ 2’ ಚಿತ್ರತಂಡದಿಂದ ಹೊಸ ಅಪ್ಡೇಟ್ ಬಂದಿದ್ದು, ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದೆ. ‘ಭಜರಂಗಿ 2’ ಚಿತ್ರವನ್ನು ನಿರ್ಮಾಣ ಮಾಡಿರುವ ಜಯಣ್ಣ ಫಿಲ್ಮ್ಸ್ ಟ್ವಿಟರ್ನಲ್ಲಿ ಹೊಸ ಮಾಹಿತಿ ಹಂಚಿಕೊಂಡಿದ್ದು, ಇದೇ ಭಾನುವಾರ (ನವೆಂಬರ್ 14) ಶಿವರಾಜ್ಕುಮಾರ್ ಅಭಿಮಾನಿಗಳೊಂದಿಗೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲಿದ್ದಾರೆ. ಇದು ಶಿವಣ್ಣನ ಅಭಿಮಾನಿಗಳಿಗೆ ಖುಷಿ ನೀಡಿದೆ.
ಜಯಣ್ಣ ಫಿಲ್ಮ್ಸ್ ಈ ಕುರಿತು ಟ್ವೀಟ್ ಮಾಡಿ, ‘ಅಭಿಮಾನಿಗಳಿಗೆ ಭಜರಂಗಿಯ ಕೊಡುಗೆ. ಶಿವರಾಜ್ ಕುಮಾರ್ ಈ ಭಾನುವಾರದಂದು (ನವೆಂಬರ್ 14) ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಲಿದ್ದಾರೆ’ ಎಂದು ತಿಳಿಸಿದೆ. ಈ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದೆ.
****