ಕನ್ನಡ ಚಿತ್ರರಂಗದ ಅಪರೂಪದ ಪ್ರತಿಭೆ ಶಂಕರ್ ನಾಗ್. ಅತ್ಯದ್ಭುತ ಕಲಾವಿದ, ಅಪ್ರತಿಮ ನಿರ್ದೇಶಕ, ವಿಭಿನ್ನ ಸಿನಿಮಾಗಳ ನಿರ್ಮಾಪಕ, ಅತ್ಯುತ್ತಮ ಕಥೆಗಾರ ‘ಕರಾಟೆ ಕಿಂಗ್’ ಶಂಕರ್ ನಾಗ್. ಅಭಿಮಾನಿಗಳ ಪ್ರೀತಿಯ ‘ಆಟೋ ರಾಜ’ ಅವರ 67ನೇ ವರ್ಷದ ಜನ್ಮದಿನೋತ್ಸವ ಇಂದು.
ನವೆಂಬರ್ 9, 1954ರಂದು ಉತ್ತರ ಕನ್ನಡದ ಹೊನ್ನಾವರದಲ್ಲಿ ಆನಂದಿ ಮತ್ತು ಸದಾನಂದ್ ನಾಗರಕಟ್ಟೆ ದಂಪತಿಗಳಿಗೆ ಜನಿಸಿದವರು ಶಂಕರ್ ನಾಗ್. ಅವರು ಇಂದು ನಮ್ಮೊಂದಿಗೆ ಇದ್ದಿದ್ದರೆ ತಮ್ಮ 67ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ ದುರಾದೃಷ್ಟವಶಾತ್ ಶಂಕರ್ ನಾಗ್ ಇಂದು ನಮ್ಮೊಂದಿಗಿಲ್ಲ. ದೈಹಿಕವಾಗಿ ಶಂಕರ್ ನಾಗ್ ಇಂದು ನಮ್ಮೆಲ್ಲರೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಮನಸ್ಸಿನಲ್ಲಿ ಹಚ್ಚ ಹಸಿರಾಗಿದ್ದಾರೆ. ಶಂಕರ್ ನಾಗ್ ಅವರ ಜನ್ಮದಿನವಾದ ಇಂದು ಅಭಿಮಾನಿಗಳು, ರಾಜಕಾರಣಿಗಳು ಮತ್ತು ತಾರೆಯರು ಅವರನ್ನು ಸ್ಮರಿಸುತ್ತಿದ್ದಾರೆ.
ನಮ್ಮ ಮೆಟ್ರೋ ಗೆ ಶಂಕರ್ ನಾಗ್ ಮೆಟ್ರೋ ಜೋರಾಗ್ತಿದೆ ಒತ್ತಾಯ
ಬೆಂಗಳೂರನ್ನು ಅಂದದ ನಗರಿಯನ್ನಾಗಿ ಮಾಡುವುದರ ಜೊತೆಗೆ ಸಿಲಿಕಾನ್ ಸಿಟಿ, ಮೆಟ್ರೋ ಸಿಟಿಯನ್ನಾಗಿಸುವ ಕನಸನ್ನು ಮೊದಲು ಕಂಡವರಲ್ಲಿ ಶಂಕರ್ ನಾಗ್ ಹೆಸರು ಮುಂಚೂಣಿಯಲ್ಲಿದೆ. ಬೆಂಗಳೂರಿಗೂ ಮೆಟ್ರೋ ರೈಲು ಬರಬೇಕೆಂಬ ಮಹದಾಸೆ ಹೊತ್ತಿದ್ದರು ಶಂಕ್ರಣ್ಣ. ಆದರೆ ಅವರು ಬದುಕಿದ್ದಾಗ ಆ ಕನಸು ನನಸಾಗಲಿಲ್ಲ. ಈಗ ನಮ್ಮ ಮೆಟ್ರೋಗೆ ಶಂಕರ್ ನಾಗ್ ಮೆಟ್ರೋ ಎಂಬ ಹೆಸರು ಇಡುವುದೇ ಸೂಕ್ತ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ.
ಶಂಕರ್ ನಾಗ್ ತಮ್ಮ ಸ್ವಂತ ಹಣ ಖರ್ಚು ಮಾಡಿ ಮೆಟ್ರೋ ಬಗ್ಗೆ ಅಧ್ಯಯನ ಮಾಡಿದ್ದರು. ಬೆಂಗಳೂರಿಗೆ ಮೆಟ್ರೋ ರೈಲು ತರಬೇಕೆಂದು ಅಭಿವೃದ್ಧಿ ಕೆಲಸಕ್ಕಾಗಿ ತಮ್ಮದೇ ಹಣ ವ್ಯಯಿಸಿದ್ದರು. ಈ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದು. ಅವರ ಕೊಡುಗೆಯೇ ನಮ್ಮ ಮೆಟ್ರೋ. ಹಾಗಾಗಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಮ್ಮ ಮೆಟ್ರೋಗೆ ಶಂಕರ್ ನಾಗ್ ಮೆಟ್ರೋ ಎಂದು ಹೆಸರಿಡಲಿ. ಕನಿಷ್ಟ ಪಕ್ಷ ಮೆಟ್ರೋ ನಿಲ್ದಾಣಗಳಲ್ಲಿ ಯಾವುದಾದರೂ ಒಂದು ನಿಲ್ದಾಣಕ್ಕಾದರೂ ಶಂಕ್ರಣ್ಣನವರ ಹೆಸರಿಟ್ಟು ಮಹಾತ್ಮರ ಹೆಸರು ಅಮರವಾಗುವಂತೆ ಮಾಡಲಿ ಎಂದು ಶಂಕರ್ ನಾಗ್ ಫ್ಯಾನ್ಸ್ ಕ್ಲಬ್ ನಿಂದ ಟ್ವಿಟರ್ ನಲ್ಲಿ ಹೊಸ ಅಭಿಯಾನವೇ ಶುರುವಾಗಿದೆ.
****