ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 12 ದಿನ. ಈ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಇಂದು ಅಭಿಮಾನಿಗಳಿಗೆ ಹಾಗೂ ಗಣ್ಯರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಈ ನಡುವೆ ನಟ ಶಿವರಾಜ್ ಕುಮಾರ್ ಅವರು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
ಹೌದು. ಅರಮನೆ ಮೈದಾನದಲ್ಲಿ ಶಿವಣ್ಣ ರಕ್ತದಾನ ಮಾಡಿದ್ದಾರೆ. ಬೆಳಗ್ಗಿನಿಂದ ಇದುವರೆಗೆ ಒಟ್ಟು 15 ಜನರಿಂದ ರಕ್ತದಾನ ಮಾಡಿದ್ದು, 16 ಮಂದಿ ನೇತ್ರದಾನಕ್ಕೆ ಸಹಿ ಮಾಡಿದ್ದಾರೆ. ರಕ್ತದಾನದ ವೀಕ್ಷಣೆ ಮಾಡುತ್ತಿದ್ದ ಶಿವಣ್ಣ ನಂತರ ತಾವೂ ರಕ್ತ ನೀಡಿದ್ದಾರೆ.
ಅಕ್ಟೋಬರ್ 29 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿಧನ ಹೊಂದಿದ್ದರು. ಈ ವೇಳೆ ನಟ ತಮ್ಮ ಕಣ್ಣುಗಳನ್ನು ದಾನ ಮಾಡಿದ್ದು, ಈ ಮೂಲಕ ನಾಲ್ವರಿಗೆ ಬೆಳಕು ನೀಡಿದ್ದರು. ಪುನೀತ್ ಅವರ ಈ ಮಹತ್ಕಾರ್ಯದಿಂದ ಪ್ರೇರಪಣೆಗೊಂಡ ಅನೇಕ ಮಂದಿ ಯುವಕರು, ದಂಪತಿ ನೇತ್ರದಾನದ ಜೊತೆಗೆ ದೇಹದಾನಕ್ಕೂ ಸಹಿ ಹಾಕಿದ್ದರು.
ಅಭಿಮಾನಿಗಳಿಗೆ ಹಾಗೂ ಗಣ್ಯರಿಗೆ ಊಟದ ವ್ಯವಸ್ಥೆ
ಇಂದು ಬೆಳಗ್ಗೆ 11.30ಯಿಂದ ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ನಡೆಯುತ್ತಿದೆ. ಅಪ್ಪು ಅಭಿಮಾನಿಗಳಿಗೆ ವೆಜ್-ನಾನ್‍ವೆಜ್ ವ್ಯವಸ್ಥೆ ಕೂಡ ಇದ್ದು, ಸುಮಾರು 5 ಸಾವಿರ ಜನರಿಗೆ ವೆಜ್, ಉಳಿದವರಿಗೆ ನಾನ್‍ವೆಜ್ ರೆಡಿ ಮಾಡಲಾಗಿದೆ. ಮುಂಜಾನೆ 4 ಗಂಟೆಗೆ ಚಿಕ್ಕಮಗಳೂರಿನಿಂದ ಬಂದ 2 ಟನ್ ಚಿಕನ್ ಬಂದಿತ್ತು. 700 ಬಾಣಸಿಗರು, ಸಹಾಯದವರು, ಕ್ಲೀನಿಂಗ್ ಕೆಲಸದವರು ಸೇರಿ 1,500 ಮಂದಿ ಸಿದ್ಧತೆ ನಡೆಸಿದ್ದಾರೆ.
ಅಭಿಮಾನಿಗಳಿಗೆ ಊಟ ಬಡಿಸಿದ ಶಿವಣ್ಣ ಮತ್ತು ರಾಘಣ್ಣ
ಇಂದು ದೊಡ್ಮನೆಯಿಂದ ಅಭಿಮಾನಿಗಳಿಗೆ ನಡೆಯುತ್ತಿರುವ ಬೃಹತ್ ಅನ್ನದಾನ ಕಾರ್ಯಕ್ರಮದಲ್ಲಿ ಸ್ವತಃ ಶಿವಣ್ಣ ಮತ್ತು ರಾಘಣ್ಣ ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ. ನಿನ್ನೆ (ನ 8) ಪುನೀತ್ ಪುಣ್ಯ ಸ್ಮರಣೆಯ ಸಂದರ್ಭದಲ್ಲೂ ಪುನೀತ್ ಸಮಾಧಿ ವೀಕ್ಷಣೆಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಶಿವಣ್ಣ ಸಿಹಿ ಹಂಚಿದ್ದರು.
****