ಅಪ್ಪು ಇನ್ನಿಲ್ಲವಾಗಿ 10 ದಿನಗಳು ಕಳೆದರೂ, ಅವರಿಲ್ಲ ಎಂಬ ದುಃಖ ಮಾತ್ರ ಉಮ್ಮಳಿಸಿ ಬರುತ್ತಲೇ ಇದೆ. ನಾಡಿನಾದ್ಯಂತ ಅಭಿಮಾನಿಗಳು ಕಣ್ಣೀರಿಡುತ್ತಲೇ ಇದ್ದಾರೆ. ಇನ್ನು, ಈ ಮಧ್ಯೆ ರಾಜ್ಯಾದ್ಯಂತ ಚಿತ್ರಮಂದಿರಗಳ ಮಾಲೀಕರು ಹಾಗೂ ಪ್ರದರ್ಶಕರಿಂದ ವಿಶೇಷವಾಗಿ ಅಪ್ಪುಗೆ ಶ್ರದ್ಧಾಂಜಲಿ ಕೋರಲಾಗಿದೆ. ‘ಪುಷ್ಪಾಂಜಲಿ, ದೀಪಾಂಜಲಿ, ಗೀತಾಂಜಲಿ, ಭಾಷ್ಪಾಂಜಲಿ’ ಹೆಸರಿನಲ್ಲಿ (ನವೆಂಬರ್ 7)ರಂದು ಸಂಜೆ 6 ಗಂಟೆಗೆ ಸರಿಯಾಗಿ ರಾಜ್ಯಾದ್ಯಂತ ಏಕಕಾಲಕ್ಕೆ ಶ್ರದ್ಧಾಂಜಲಿ ಕೋರಲಾಗಿದೆ.
ರಾಜ್ಯದಲ್ಲಿರುವ ಸುಮಾರು 650ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಪುನೀತ್ ರಾಜ್‌ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಗಿದೆ. ಥಿಯೇಟರ್ ಸಿಬ್ಬಂದಿಗಳು ಅಪ್ಪು ಅವರ ಫೋಟೋಗೆ ಪುಷ್ಪ ನಮನ ಸಲ್ಲಿಸಿ, ಕ್ಯಾಂಡಲ್ ಹಚ್ಚಿ, ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಈ ಶ್ರದ್ಧಾಂಜಲಿ ಕಾರ್ಯಕ್ರಮಕ್ಕಾಗಿ ಗೀತ ರಚನಕಾರ, ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಅವರು ‘ಅಪ್ಪು-ಶ್ರದ್ಧಾಂಜಲಿ’ ಎಂಬ ಹಾಡನ್ನು ರಚಿಸಿದ್ದರು. ಆ ಹಾಡನ್ನು ಕೂಡ ಪ್ರಸಾರ ಮಾಡಲಾಗಿದೆ.
ಸಿನಿಮಾ ತೆರೆಕಾಣುವ ಮೊದಲ ದಿನ ಪುನೀತ್ ಸಾಮಾನ್ಯವಾಗಿ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದರು. ಥಿಯೇಟರ್ ಸಿಬ್ಬಂದಿಗಳ ಜೊತೆಗೂ ಒಳ್ಳೆಯ ಒಡನಾಟ ಹೊಂದಿದ್ದರು. ಅವರು ಚಿತ್ರಮಂದಿರಗಳಿಗೆ ಭೇಟಿ ನೀಡಿದಾಗ, ಸಾವಿರಾರು ಅಭಿಮಾನಿಗಳು ಸೇರುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಬೇರೆ ಬೇರೆ ಊರುಗಳಲ್ಲಿರುವ ಚಿತ್ರಮಂದಿರಗಳಿಗೆ ಪುನೀತ್ ಭೇಟಿ ನೀಡುತ್ತಿದ್ದರು. ಕನ್ನಡದ ಮುಖ್ಯ ಸ್ಟಾರ್‌ಗಳಲ್ಲಿ ಪುನೀತ್ ಅವರು ಕೂಡ ಒಬ್ಬರು. ಅವರ ಸಿನಿಮಾಗಳು ತೆರೆಕಂಡಾಗ ಚಿತ್ರಮಂದಿರಗಳು ಕಿಕ್ಕಿರಿದು ತುಂಬುತ್ತಿದ್ದವು. ಚಿತ್ರೋದ್ಯಮಕ್ಕೆ ಅವರೊಂದು ದೊಡ್ಡ ಬಲವಾಗಿದ್ದರು. ಇನ್ನು, ಬೆಂಗಳೂರಿನ ಪ್ರಸನ್ನ, ವಿರೇಶ್ ಮುಂತಾದ ಚಿತ್ರಮಂದಿರಗಳಲ್ಲಿ ಪುನೀತ್ ಫೋಟೋಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಿ, ಶ್ರದ್ಧಾಂಜಲಿ ಕೋರಲಾಗಿದೆ.
****