ಪುನೀತ್ ರಾಜ್‌ಕುಮಾರ್ ನಿಧನರಾದ ದಿನದಿಂದ ಇಲ್ಲಿಯವರೆಗೆ ಸರ್ಕಾರವು ಸಾಕಷ್ಟು ಮುತುವರ್ಜಿವಹಿಸಿ ಎಲ್ಲ ಕಾರ್ಯಗಳಲ್ಲಿಯೂ ಕುಟುಂಬದ ಜೊತೆ ನಿಂತಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದಲೇ ಅಪ್ಪು ಅಂತಿಮ ದರ್ಶನ ಹಾಗೂ ಅಂತಿಮ ಸಂಸ್ಕಾರ ಸುಗಮವಾಗಿ ನೆರವೆರಿದೆ.
ಈಗಾಗಲೇ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರುಗಳು ಸರ್ಕಾರ ನೀಡಿದ ನೆರವಿಗೆ ಧನ್ಯವಾದ ಹೇಳಿದ್ದಾರೆ. ಇದೀಗ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸರ್ಕಾರಕ್ಕೆ, ಗೃಹ ಸಚಿವರಿಗೆ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಆಯುಕ್ತರಿಗೆ ಪತ್ರ ಮುಖೇನ ಧನ್ಯವಾದ ಅರ್ಪಿಸಿದ್ದಾರೆ.

ಪತ್ರ ಬರೆದಿರುವ ಅಶ್ವಿನಿ, ”ಪುನೀತ್ ರಾಜ್‌ಕುಮಾರ್ ಅಕಾಲಿಕ ಅಗಲಿಕೆ ನಮಗಷ್ಟೆ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ಪುನೀತ್ ಅವರು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದವರು. ನಮ್ಮ ನೋವ್ನನು ಅಡಗಿಸಿಟ್ಟು ಅವರನ್ನು ಸಕಲ ಗೌರವಗಳೊಂದಿಗೆ ಕಳಿಸಿಕೊಡುವುದು ನಮ್ಮ ಜವಾಬ್ದಾರಿ ಆಗಿತ್ತು. ಇಂಥಹಾ ಸಂದರ್ಭದಲ್ಲಿ ಇಡೀಯ ಪೊಲೀಸ್ ಇಲಾಖೆ ನಮಗೆ ಬೆಂಬಲವಾಗಿ ನಿಂತು ಗೌರವಯುತವಾಗಿ ಅವರನ್ನು ಕಳಿಸಿಕೊಡಲು ಸಹಕರಿಸಿದೆ. ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ, ಮೆರವಣಿಗೆ ಮತ್ತು ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿ ಎಲ್ಲೂ ಕಾನೂನು ಸುವ್ಯವಸ್ಥೆಗೆ ನಮ್ಮಿಂದ ಧಕ್ಕೆಯಾಗದಂತೆ ನೋಡಿಕೊಂಡಿದ್ದೀರಿ. ನಿಮ್ಮ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲಾ ಅಭಿಮಾನಿಗಳ ಪರವಾಗಿ ನಿಮಗೆ ಮತ್ತು ನಿಮ್ಮ ಎಲ್ಲಾ ಸಿಬ್ಬಂದಿಗಳಿಗೆ ಹೃದಯಪೂರ್ವಕ ಕೃತಜ್ಞತೆಗಳು” ಎಂದಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್.
ಸರ್ಕಾರ ಮತ್ತು ವಿಶೇಷವಾಗಿ ಪೊಲೀಸ್ ಇಲಾಖೆ ಪುನೀತ್ ರಾಜ್‌ಕುಮಾರ್ ನಿಧನ ಸಂದರ್ಭದಲ್ಲಿ ಬಹಳ ಬೆಂಬಲ ನೀಡಿತು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಹೇಳಿದ ಪ್ರಕಾರ, ಸುಮಾರು 20,000 ಬೆಂಗಳೂರಿನ ಪೊಲೀಸ್ ಸಿಬ್ಬಂದಿ, 1500 ಕ್ಕಿಂತಲೂ ಹೆಚ್ಚು ಜನ ಬೇರೆ ಜಿಲ್ಲೆಗಳಿಂದ ಆಗಮಿಸಿದ ಪೊಲೀಸರು. ಎರಡು ಕಂಪೆನಿ ಸೆಂಟ್ರಲ್ ಫೋರ್ಸ್, 50 ಪ್ಲಾಟೂನ್, ಕೆಎಸ್‌ಆರ್‌ಪ ತುಕಡಿ ಇವರೆಲ್ಲರೂ ಸೇರಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಸಾಮಾನ್ಯ ಕಾನ್‌ಸ್ಟೇಬಲ್, ಹೋಮ್‌ಗಾರ್ಡ್‌ನಿಂದ ಹಿಡಿದು ಆಫೀಸರ್ ವರೆಗೆ ಎಲ್ಲರೂ ಶ್ರಮ ಪಟ್ಟಿದ್ದಾರೆ ಎಂದಿದ್ದರು ಗೃಹ ಸಚಿವರು.
ಸಿಎಂ ಬಸವರಾಜ ಬೊಮ್ಮಾಯಿ ಸಹ ಪುನೀತ್ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಜೊತೆಗೆ ಇದ್ದರು. ಪುನೀತ್ ರಾಜ್‌ಕುಮಾರ್ ಅವರಿಗೆ ಆಪ್ತರಾಗಿದ್ದ ಬಸವರಾಜ ಬೊಮ್ಮಾಯಿ ಭಾವುಕದ ವಿದಾಯವನ್ನು ಅಪ್ಪುಗೆ ಹೇಳಿದರು. ಅಪ್ಪು ನಿಧನವಾದ ದಿನದಿಂದ ಸತತ ಮೂರು ದಿನ ಕುಟುಂಬದ ಜೊತೆಗಿದ್ದು ಎಲ್ಲ ಕಾರ್ಯಗಳು ಸುಲಲಿತವಾಗಿ ನೆರವೇರುವಂತೆ ನೋಡಿಕೊಂಡರು.
ಕಳೆದ ಶುಕ್ರವಾರ ಸಹ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಸಿಎಂ ಭೇಟಿ ನೀಡಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸಾಂತ್ವನ ಹೇಳಿದರು. ಮತ್ತು 11ನೇ ದಿನದ ಕಾರ್ಯದ ಬಗ್ಗೆ ಚರ್ಚೆ ನಡೆಸಿ ಹೋಗಿದ್ದಾರೆ.
****