ಕ್ರೇಜಿ ಸ್ಟಾರ್ ರವಿಚಂದ್ರನ್ ಪುತ್ರ ಮನು ರವಿಚಂದ್ರನ್ ಅಭಿನಯದ “ಮುಗಿಲ್ ಪೇಟೆ” ಇದೇ ನವೆಂಬರ್ 19ರಂದು ಥಿಯೇಟರ್ಗೆ ಬರಲು ಸಜ್ಜಾಗಿದೆ. ಹೀಗಾಗಿ ಮನು ರವಿಚಂದ್ರನ್ ಸೇರಿದಂತೆ ಇಡೀ ಚಿತ್ರತಂಡ ಮೈಸೂರಿಗೆ ಪ್ರಚಾರಕ್ಕಾಗಿ ಪಯಣ ಬೆಳೆಸುತ್ತಿದೆ. ಈ ವೇಳೆ ರವಿಚಂದ್ರನ್ ಹಾಗೂ ಪುತ್ರ ಮನು ಜೊತೆ ನಡೆದ ಚುಟುಕಿನ ಸಂಭಾಷಣೆ ಕ್ರೇಜಿ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.
ರವಿಚಂದ್ರನ್ ಹಾಗೂ ಪುತ್ರ ಮನು ನಡುವಿನ ಸಂಭಾಷಣೆಯಿಂದಲೇ ಮುಗಿಲ್ ಪೇಟೆ ಪ್ರಚಾರ ಆರಂಭ ಆಗಿದೆ. ಈ ವಿಡಿಯೋದಲ್ಲಿ ಕ್ರೇಜಿಸ್ಟಾರ್ ತಮ್ಮ ಪುತ್ರನಿಂದ ‘ಮುಗಿಲ್ ಪೇಟೆ’ ಚಿತ್ರ ಬಿಡುಗಡೆಯಿಂದ ಹಿಡಿದು ಮೈಸೂರಿನಲ್ಲಿ ಎಲ್ಲೆಲ್ಲಿ ಪ್ರಚಾರ ಮಾಡುತ್ತಾರೆ ಅನ್ನುವ ಮಾಹಿತಿಯನ್ನು ಪಡೆದಿದ್ದಾರೆ. ಇದೇ ವೇಳೆ ಮೈಸೂರಿಗೆ ಹೋದ ಕೂಡಲೇ ಮೊದಲು ಚಾಮುಂಡಿ ತಾಯಿಯ ದರ್ಶನ ಪಡೆದ ಬಳಿಕವಷ್ಟೇ ಸಿನಿಮಾ ಪ್ರಚಾರ ಆರಂಭ ಮಾಡುವಂತೆ ಸಲಹೆ ನೀಡಿದ್ದಾರೆ.
ಮುಗಿಲ್ ಪೇಟೆ ಪ್ರಚಾರಕ್ಕಾಗಿ ಮೈಸೂರಿನ ಪ್ರತಿಷ್ಟಿತ ಕಾಲೇಜುಗಳಿಗೆ ಮನು ರವಿಚಂದ್ರನ್ ಭೇಟಿ ನೀಡುತ್ತಿದ್ದಾರೆ. ತಂದೆಯ ಸೂಚನೆಯಂತೆ ಮೊದಲು ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು, ಮಹಾರಾಣಿ ಕಾಲೇಜಿಗೆ ತಲುಪಲಿದ್ದಾರೆ. ಬಳಿಕ ಯುವರಾಜ ಹಾಗೂ ಮಹಾರಾಜ ಕಾಲೇಜಿನಲ್ಲಿ ಮುಗಿಲ್ ಪೇಟೆ ಸಿನಿಮಾ ಪ್ರಚಾರ ಮಾಡಲಿದ್ದಾರೆ.