ಪುನೀತ್ ರಾಜಕುಮಾರ್ ಅವರ 11ನೇ ದಿನದ ಕಾರ್ಯ ನಾಳೆ (ಸೋಮವಾರ ನ 8) ನಡೆಯಲಿದೆ. ಬೆಳಗ್ಗೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನೀತ್ ನಿವಾಸದಲ್ಲಿ ಕುಟುಂಬಸ್ಥರಿಂದ ಮನೆಯಲ್ಲಿ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಸದ್ಯ ಕುಟುಂಬಸ್ಥರು ನಾಳಿನ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಂದು, ಸಂಪ್ರದಾಯದಂತೆ ವಿನಯ್ ರಾಜಕುಮಾರ್ ತಲೆಗೂದಲು ತೆಗೆಸುವ ಶಾಸ್ತ್ರ ನಡೆಸಿದ್ದಾರೆ. ಸವಿತ ಸಮಾಜದ ರಮೇಶ್ ಎಂಬುವವರು ವಿನಯ್ ಅವರ ತಲೆಯಲ್ಲಿ ಐದು ಕಡೆ ಕೂದಲು ತೆಗೆಯುವ ಮೂಲಕ ಶಾಸ್ತ್ರ ನೆರವೇರಿಸಿದ್ದಾರೆ.
ಚಿಕ್ಕಪ್ಪನ ಪುಣ್ಯಕಾರ್ಯ ಮಾಡಲಿರುವ ವಿನಯ್ ರಾಜ್ ಕುಮಾರ್ ಗೆ ಇಂದು ತಲೆಯ ಐದು ಕಡೆ ಕೂದಲು ತೆಗೆಸಿ ಶಾಸ್ತ್ರ ನಡೆಯಿತು. ನಾಳೆ ಅಪ್ಪು ಮಗನ ಸ್ಥಾನದಲ್ಲಿ ನಿಂತು ಪುಣ್ಯ ಕಾರ್ಯ ಮಾಡಲಿದ್ದಾರೆ ವಿನಯ್. ಸವಿತಾ ಸಮಾಜದ ಸದಸ್ಯರಾದ ರಮೇಶ್ ಬಾಬು ಎಂಬುವವರಿಂದ ವಿನಯ್ ಗೆ ಕೇಶ ತೆಗೆಸುವ ಶಾಸ್ತ್ರ ನಡೆಯಲಿದೆ.
ಸವಿತಾ ಸಮಾಜದ ಸದಸ್ಯ ರಮೇಶ್ ಬಾಬು ಡಾ.ರಾಜ್ ಕುಟುಂಬಕ್ಕೆ 30 ವರ್ಷಗಳಿಂದ ಪರಿಚಿತರು. ಅಪ್ಪು ಬಾಲ್ಯದಲ್ಲಿದ್ದಾಗ ಹೇರ್ ಕಟ್ ಮಾಡುತ್ತಿದ್ದ ರಮೇಶ್ ಬಾಬು, ರಾಘಣ್ಣ ಪುತ್ರರಾದ ವಿನಯ್ , ಗುರುರಾಜ್ ಕುಮಾರ್ ಬಾಲಕರಾಗಿದ್ದಾಗಲೂ ಹೇರ್ ಕಟ್ ಮಾಡುತ್ತಿದ್ದರು. “ಇಂದು ವಿನಯ್ ತಲೆಯ ಐದು ಕಡೆ ಕೇಶ ತೆಗೆಸಿ ಶಾಸ್ತ್ರ ಮಾಡಿದ್ದೇನೆ ” ನಾಳೆ ಸಮಾಧಿ ಬಳಿ ಪೂಜೆ ಇರುತ್ತೆ, ಅಲ್ಲೂ ಶಾಸ್ತ್ರ ಇರುತ್ತೆ” ಎಂದು ಮಾಹಿತಿ ನೀಡಿದ್ದಾರೆ ರಮೇಶ್ ಬಾಬು. ಅಪ್ಪು ಅಗಲಿಕೆ ತುಂಬಾ ನೋವು ಕೊಟ್ಟಿದೆ , ನಮಗೆ ಇದನ್ನ ನಂಬೋದಕ್ಕೇ ಆಗ್ತಿಲ್ಲ ಎಂದಿದ್ದಾರೆ ರಮೇಶ್ ಬಾಬು.
****