ಮಾನ್ಯ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನಿನ್ನೆ(ನ.5) ಸಂಜೆ ಸಚಿವ ಆರ್.ಅಶೋಕ್, ಅಶ್ವತ್ಥನಾರಾಯಣ ಹಾಗೂ ಇತರರೊಂದಿಗೆ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಆಗಮಿಸಿ ಪುನೀತ್ ಪತ್ನಿ ಅಶ್ವಿನಿ ಅವರೊಟ್ಟಿಗೆ ಮಾತನಾಡಿ ಅವರಿಗೆ ಸಾಂತ್ವನದ ನುಡಿಗಳನ್ನು ಹೇಳಿದ್ದಾರೆ.
ಪುನೀತ್ ರಾಜಕುಮಾರ್ ನಿಧನದ ನಂತರ ಅವರ ಅಂತಿಮ ದರ್ಶನ ಮತ್ತು ಅಂತಿಮ ವಿಧಿ ವಿಧಾನಗಳನ್ನು ನೆರೆವೇರಿಸಲು ಸರ್ಕಾರ ಸಂಪೂರ್ಣ ಜವಬ್ದಾರಿ ತೆಗೆದುಕೊಂಡಿತ್ತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ”ಅಪ್ಪು ಸರ್ವರಿಗೂ ಪ್ರಿಯರಾದವರು, ಅವರ ಕುಟುಂಬ ಅತೀವ ದುಃಖದಲ್ಲಿದೆ. ಅವರ ಕುಟುಂಬದ ಜೊತೆಗೆ ನಾವಿದ್ದೇವೆ ಎಂದು ಅವರಿಗೆ ಭರವಸೆ ನೀಡಿದ್ದೇವೆ. ಸರ್ಕಾರ ಅವರಿಗೆ ನೀಡಿದ ಭರವಸೆಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಆದರೆ ಅದು ನಮ್ಮ ಕರ್ತವ್ಯವಾಗಿತ್ತು” ಎಂದು ಹೇಳಿದರು.
”ಅಪ್ಪು ಅವರಿಗೆ ಸಲ್ಲಬೇಕಾದ ಗೌರವಗಳನ್ನು ನೀಡಲು ಸರ್ಕಾರ ತಯಾರಿದೆ ಎಂಬುದನ್ನು ಅವರ ಕುಟುಂಬ ಸದಸ್ಯರಿಗೆ ಹೇಳಿದ್ದೇವೆ. ಈಗ ನವೆಂಬರ್ 16 ರಂದು ಫಿಲಂ ಚೇಂಬರ್ನವರು ಅಪ್ಪು ನಮನ ಕಾರ್ಯಕ್ರಮ ಮಾಡುತ್ತಿದ್ದಾರೆ. ಅವರು ನಾಳೆ ಸಭೆಯೊಂದನ್ನು ಇಟ್ಟುಕೊಂಡಿದ್ದಾರೆ. ಅವರಿಗೆ ಅಗತ್ಯವಾದ ಭದ್ರತೆ ಇನ್ನಿತರೆ ನೆರವುಗಳನ್ನು ಸರ್ಕಾರ ನೀಡಲಿದೆ” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
”ನವೆಂಬರ್ 16ರ ಬಳಿಕ ಪುನೀತ್ ಕುಟುಂಬದವರೆಲ್ಲ ಕುಳಿತು ಚರ್ಚಿಸಿ ಮುಂದಿನ ಕಾರ್ಯಗಳನ್ನು ನಿರ್ಧರಿಸಲಿದ್ದಾರೆ. ಅವರು ತಮ್ಮ ತೀರ್ಮಾನವನ್ನು ಹೇಳಿದ ಬಳಿಕ ಸರ್ಕಾರ ಅದಕ್ಕೆ ಅಗತ್ಯವಾದ ಅನುಕೂಲಗಳನ್ನು ಮಾಡಿಕೊಡಲಿದೆ” ಎಂದರು.
ಅಪ್ಪು ಸಾವಿನ ತನಿಖೆ ಆಗಬೇಕೆಂದು ಕೆಲವರ ಒತ್ತಾಯದ ಬಗ್ಗೆ ಮಾತನಾಡಿದ ಸಿಎಂ, ”ಈಗ ಅವರ ಕುಟುಂಬದ ಸದಸ್ಯರು ಬಹಳ ದುಃಖದಲ್ಲಿದ್ದಾರೆ. ಅವರು ಈ ಬಗ್ಗೆ ಚರ್ಚೆ ಮಾಡಿಲ್ಲ. ನವೆಂಬರ್ 16 ರ ಕಾರ್ಯಕ್ರಮದ ಬಳಿಕ ನಾನು ಅವರೊಟ್ಟಿಗೆ ಮಾತನಾಡುತ್ತೇನೆ” ಎಂದರು.
****