ಭಜರಂಗಿ 2 ರಿಲೀಸ್ ಆದ ದಿನವೇ ಪುನೀತ್ ಸಾವು ಇಡೀ ಕನ್ನಡ ಚಿತ್ರರಂಗವನ್ನೇ ಸ್ತಬ್ಧ ಮಾಡಿಬಿಟ್ಟಿತ್ತು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಥಿಯೇಟರ್ ನಲ್ಲಿ ಭಜರಂಗಿ ನೋಡುತ್ತಾ ಕುಳಿತಿದ್ದ ಜನ ಅರ್ಧಕ್ಕೆ ಚಿತ್ರಬಿಟ್ಟು ‘ಅಪ್ಪು.. ಅಪ್ಪು’ ಎಂದು ಕೂಗುತ್ತಾ, ಗೋಳಾಡುತ್ತಾ ಹೊರಗೆ ಓಡಿಬಂದಿದ್ರು. ಸಾಕಷ್ಟು ಭರವಸೆ ಮತ್ತು ತಯಾರಿಯೊಂದಿಗೆ ಭಜರಂಗಿ 2 ಸಿನಿಮಾ ರಿಲೀಸ್ ಮಾಡಿದ್ದ ಚಿತ್ರತಂಡಕ್ಕೆ ಅಪ್ಪು ಸಾವಿನ ಸುದ್ದಿ ತಲ್ಲಣವನ್ನು ಸೃಷ್ಟಿಮಾಡಿಬಿಡ್ತು. ಇಡೀ ಸ್ಯಾಂಡಲ್ ವುಡ್ ಗೆ ಸ್ಯಾಂಡಲ್ ವುಡೇ ಸ್ತಬ್ಧಗೊಂಡಿತ್ತು.
ಕಳೆದೆರಡು ದಿನದ ಹಿಂದೆ ಭಜರಂಗಿ 2 ಚಿತ್ರದ ವಿಲನ್ ಗಳಲ್ಲಿ ಒಬ್ಬರಾದ ಚಲುವರಾಜು ವೀಡಿಯೋ ಮೂಲಕ ಅಳಲು ತೋಡಿಕೊಂಡಿದ್ರು, “ಅಪ್ಪು ಸಾವು ನಮಗೆ ನೋವು ತಂದಿದೆ ಹೇಗೆ ಪ್ರತಿಕ್ರಿಯಿಸಬೇಕೊ ತಿಳಿಯುತ್ತಿಲ್ಲ ನಮ್ಮ ಭವಿಷ್ಯ ಇಲ್ಲಿಗೆ ಮುಗಿಯುತ್ತಿದೆ ಎನ್ನಿಸುತ್ತದೆ ನಮ್ಮದು 3 ವರ್ಷದ ಶ್ರಮ ನಮ್ಮನ್ನು ಕೈಬಿಡಬೇಡಿ ಎಂದು ಆತಂಕ ಹೊರ ಹಾಕಿದ್ರು.
ಈಗ ಜನ ಅಪ್ಪು ಸಾವಿನ ನೋವಿನಿಂದ ಹೊರಬರಲು ಯತ್ನಿಸುತ್ತಿದ್ದಾರೆ. ಮತ್ತೆ ಚಿತ್ರಮಂದಿರದತ್ತ ಮುಖ ಮಾಡಿದ್ದಾರೆ.ಹೌದು… ಸಾಲು ಸಾಲು ರಜೆ, ದೀಪಾವಳಿ ಹಬ್ಬದ ಸಡಗರ ಜನರನ್ನು ಮತ್ತೆ ಚಿತ್ರಮಂದಿರದತ್ತ ಕರೆದೊಯ್ದಿದೆ. ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಷನ್ ಅಂದ್ರೇನೇ ಸೂಪರ್. ಹೀಗಿದ್ದಾಗ ಅವರಿಬ್ಬರ ಹೊಂದಾಣಿಕೆಯಿಂದಲೇ ಮೂಡಿಬಂದ ಭಜರಂಗಿ 2 ಚಿತ್ರವನ್ನು ಜನ ಮಿಸ್ ಮಾಡಿಕೊಳ್ಳಲು ಇಷ್ಟಪಡಲ್ಲ. ಹಾಗಾಗಿಯೇ ಇಂದು ಚಿತ್ರಮಂದಿರದ ಕಡೆಗೆ ಪ್ರೇಕ್ಷಕ ಮುಖ ಮಾಡಿದ್ದಾನೆ.
ಸಿನಿಮಾ ಬಿಡುಗಡೆಯಾದಾಗ ಜನರಿಂದ ಮಿಶ್ರ ಪ್ರತ್ರಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಇನ್ನೂ ಸಾಕಷ್ಟು ಜನ ಥಿಯೇಟರ್ ಕಡೆ ಮುಖಮಾಡಿರಲಿಲ್ಲ. ರಜೆಗಾಗಿ ಕಾಯ್ತಿದ್ದ ಜನರಿಗೆ ಸಿನಿಮಾ ನೋಡಲು ಈಗ ಸಮಯವಾಗಿದೆ. ಪುನೀತ್ ಸಾವಿನ ಹಿನ್ನಲೆಯಲ್ಲಿ ಸ್ತಬ್ಧವಾಗಿದ್ದ ಚಿತ್ರರಂಗ ಈಗ ಮನೊದಲಿನ ಸ್ಥಿತಿಗೆ ವಾಪಸ್ ಆಗಲು ಯತ್ನಿಸುತ್ತಿದೆ.
ಸಿನಿಮಾ ರಿಲೀಸ್ ಆದ ದಿನವೇ ಶೋ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಪುನೀತ್ ಸಾವಿನ ನೋವು ಶಿವಣ್ಣರನ್ನು ಇನ್ನಿಲ್ಲದಂತೆ ಬಾಧಿಸಿತು. ಮೇಲಾಗಿ ಅಂದು ಜನ ಥಿಯೇಟರ್ ಕಡೆ ಕಾಲಿಡಲೂ ಇಲ್ಲ. ಆದರೆ ತಮ್ಮನ್ನು ನಂಬಿ ಹೂಡಿಕೆ ಮಾಡಿದ ನಿರ್ಮಾಪಕರನ್ನು ಹಾಗೆ ಕೈಬಿಡಬಾರದೆಂದು ಶಿವಣ್ಣ ತಮ್ಮನ ಅಗಲಿಕೆಯ ನೋವಿನ ಮಧ್ಯೆಯೂ ಭಜರಂಗಿ 2 ಸಿನಿತಂಡದ ಪರ ನಿಂತಿದ್ದಾರೆ.
ಮೂಲಗಳ ಪ್ರಕಾರ ಸಿನಿಮಾ ಬಜೆಟ್ 15 ಕೋಟಿ ಅಂತೆ. ಡಬ್ಬಿಂಗ್ ಹಕ್ಕು 5 ಕೋಟಿಗೆ ಮಾರಾಟವಾಗಿದೆಯಂತೆ. ಆಡಿಯೋ ರೈಟ್ಸ್ ಸಹ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಇನ್ನು ಟಿವಿ ರೈಟ್ಸ್ ನಿಂದಲೂ ಹಣ ಸಿಗುತ್ತೆ. ಹಾಗಾಗಿ ಹೂಡಿದ ಬಂಡವಾಳಕ್ಕೆ ಮೋಸವಂತೂ ಆಗಲ್ಲ. ಇನ್ನು ಜನ ಸಹ ಹೀಗೆಯೇ ಚಿತ್ರಮಂದಿರದತ್ತ ಬಂದರೆ ನಿರ್ಮಾಪಕರಿಗೆ ಏನಾದರೂ ಸ್ವಲ್ಪ ಲಾಭವಾಗಬಹುದಾ ಗೊತ್ತಿಲ್ಲ? ಮುಂದೆ ಇದನ್ನ ನಿರ್ಮಾಪಕರೇ ಹೇಳಬೇಕು.
****