ಅಕ್ಟೋಬರ್ 29 ರಂದು ಪುನೀತ್ ರಾಜಕುಮಾರ್ ಅವರ ನಿಧನದಿಂದ ಇಡೀ ಕರುನಾಡು ಶೋಕ ಸಾಗರದಲ್ಲಿ ಮುಳುಗಿತ್ತು, ಅವರ ಸಾವಿನ ಸುದ್ದಿ ಕೇಳಿದ ಅಪ್ಪು ಅಭಿಮಾನಿಗಳು ಸಾಗರೋಪಾದಿಯಲ್ಲಿ ಬಂದು ಪುನೀತ್ ಅಂತಿಮ ದರ್ಶನ ಪಡೆದರು.
ಪುನೀತ್ ಸಾವನ್ನಪ್ಪಿ 5ನೇ ದಿನಕ್ಕೆ ಪುನೀತ್ ಕುಟುಂಬಸ್ಥರು, ಸ್ನೇಹಿತರು ಮತ್ತು ಗಣ್ಯರ ಸಮ್ಮುಖದಲ್ಲಿ ಹಾಲು ತುಪ್ಪ ಶಾಸ್ತ್ರವನ್ನು ನೆರವೇರಿಸಿತ್ತು. ಕಂಠೀರವ ಸ್ಟುಡಿಯೋದಲ್ಲಿ ಏರ್ಪಡಿಸಿದ್ದ ಹಾಲು ತುಪ್ಪ ಕಾರ್ಯಕ್ಕೆ ಅಭಿಮಾನಿಗಳಿಗೆ ಅವಕಾಶ ಇರಲಿಲ್ಲ. ಈಗ ಅಭಿಮಾನಿಗಳಿಗೆ ಕಂಠೀರವ ಸ್ಟುಡಿಯೋಗೆ ತೆರಳಲು ಅವಕಾಶ ಮಾಡಿಕೊಡಲಾಗಿದ್ದು, ಜನಸಾಗರವೇ ಹರಿದು ಬರುತ್ತಿದೆ.
ಹೀಗಾಗಿ ಪುನೀತ್ ಅವರ 11ನೇ ದಿನದ ಶಾಸ್ತ್ರವನ್ನು ಮಾಡಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದು, ನವೆಂಬರ್ 8ಕ್ಕೆ ಈ ಕಾರ್ಯ ನೆರವೇರಲಿದೆ. ಅಂದು ಕೂಡ ಕೇವಲ ಕುಟುಂಬಸ್ಥರಿಗಷ್ಟೇ ಸಮಾಧಿ ಬಳಿ ಸೇರಲು ಅವಕಾಶ ಇದೆ. 11ನೇ ದಿನ ಕಾರ್ಯದ ನಂತರ ಅಂದರೇ ನವೆಂಬರ್ 9ಕ್ಕೆ ಅಭಿಮಾನಿಗಳಿಗೆ ಅನ್ನದಾನ ಮಾಡಲು ರಾಜ್ ಕುಟುಂಬ ತೀರ್ಮಾನಿಸಿದೆ. ನಗರದ ಪ್ಯಾಲೇಸ್ ಗ್ರೌಂಡ್ನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬರುವಂತಹ ಎಲ್ಲಾ ಅಭಿಮಾನಿಗಳಿಗೂ ಅಂದು ಅನ್ನದಾನ ನೆರವೇರಲಿದೆ. ಬೆಳಗ್ಗೆ 12 ಗಂಟೆಯಿಂದ ಅನ್ನದಾನ ಆರಂಭವಾಗಲಿದ್ದು, ಅಂದು ಪುನೀತ್ ರಾಜ್ಕುಮಾರ್ ಅವರಿಗೆ ಪುಷ್ಪನಮನ ಕೂಡ ಸಲ್ಲಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಅಂದು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಶಾಂತ ರೀತಿಯಾಗಿ ನಡೆದುಕೊಳ್ಳಬೇಕು ಎಂದು ದೊಡ್ಮನೆ ಕುಟುಂಬ ಮನವಿ ಮಾಡಿಕೊಂಡಿದೆ.
****