ಪುನೀತ್ ರಾಜಕುಮಾರ್ ಅವರ ಅಕಾಲಿಕ ಸಾವಿಗೆ ಇಡೀ ಭಾರತ ಚಿತ್ರರಂಗ ಕಂಬನಿ ಮಿಡಿದಿದೆ. ತಮಿಳು, ತೆಲುಗು ಸ್ಟಾರ್ ನಟರು ಪುನೀತ್ ಮನೆಗೆ ಭೇಟಿ ನೀಡಿ ಅವರ ಕುಟುಂಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
ಇಂದು ತಮಿಳು ಪತ್ರಕರ್ತ ನಕ್ಕೀರನ್ ಗೋಪಾಲ್ ಶಿವರಾಜಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳಿದ್ದಾರೆ. ನಕ್ಕೀರನ್ ಗೋಪಾಲ್ ಮೊದಲಿನಿಂದಲೂ ದೊಡ್ಮನೆಯೊಂದಿಗೆ ನಿಕಟವಾದ ಸಂಬಂಧ ಹೊಂದಿದ್ದಾರೆ. ಡಾ ರಾಜಕುಮಾರ್ ಅವರನ್ನ ವೀರಪ್ಪನ್ ಅಪಹರಿಸಿದಾಗ ಅವರ ಬಿಡುಗಡೆಗೆ ಸಾಕಷ್ಟು ಶ್ರಮ ವಹಿಸಿದ್ದು ನಕ್ಕೀರನ್ ಗೋಪಾಲ್.
ಈ ವೇಳೆ ಮಾತನಾಡಿದ ನಕ್ಕೀರನ್ ಗೋಪಾಲ್ ನಟ ಪುನೀತ್ ನಿಧನದ ಸುದ್ದಿ ನಂಬಲು ಸಾಧ್ಯವಿಲ್ಲ. ಶಿವರಾಜ್ ಕುಮಾರ್ ಅವರ ಭೇಟಿಯಾದೆ. ಅವರು ತುಂಬಾ ದುಃಖದಲ್ಲಿದ್ದಾರೆ. ಒಬ್ಬ ವ್ಯಕ್ತಿ ಇಷ್ಟೆಲ್ಲಾ ಮಾಡಬಹುದು ಅಂತಾ ಅಪ್ಪು ತೋರಿಸಿಕೊಟ್ಟಿದ್ದಾರೆ ಎಂದರು. ಇನ್ನು, ಡಾ.ರಾಜ್ ಕುಮಾರ್ ಅವರನ್ನ ವೀರಪ್ಪನ್ ಅಪಹರಣ ಮಾಡಿದ್ದಾಗ ನಾನೂ ಕಾಡಿಗೆ ಹೋಗಿದ್ದೆ. ರಾಜ್ ಕುಮಾರ್ ಅವನ್ನ ಭೇಟಿಯಾದೆ. ಆಗ ರಾಜ್ ಕುಮಾರ್ ಅವರಿಗೆ ಅಪ್ಪು ಅವರದ್ದೇ ಚಿಂತೆಯಾಗಿತ್ತು. ವೀರಪ್ಪನ್ ಅಪಹರಣ ಮಾಡಿದ್ದಾಗಲೂ ಅಪ್ಪುವಿನದ್ದೇ ಚಿಂತೆಯಾಗಿತ್ತು ಅವರಿಗೆ. ಅಪ್ಪು ಬ್ಯುಸಿನೆಸ್ ಅಂತಾ ಹೋಗಿದ್ದಾನೆ, ಅವನು ನಟನಾದ್ರೆ ಸಾಕು ನಾನು ಸತ್ತರೂ ಪರವಾಗಿಲ್ಲ ಅಂದಿದ್ದರು. ಅದನ್ನ ನಾನು ಪುನೀತ್ ಗೆ ಬಂದು ಆಗ ಹೇಳಿದ್ದೆ. ಈಗ ಪುನೀತ್ ತುಂಬಾ ದೊಡ್ಡ ಮಟ್ಟಕ್ಕೆ ಬೆಳೆದು, ನಮ್ಮನ್ನು ಅಗಲಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದರು.
****