ನಮ್ಮೆಲ್ಲರಿಂದ ದೂರ ಆಗಿರುವ ಪುನೀತ್ ರಾಜಕುಮಾರ್ ಅವರಿಗೆ ಗೌರವ ನಮನ ಸಲ್ಲಿಸುವ ಉದ್ದೇಶದಿಂದ ‘ಪುನೀತ್ ನುಡಿ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಹೇಳಿಕೆ ನೀಡಿದ್ದಾರೆ. ನ.16ರಂದು ಕಾರ್ಯಕ್ರಮ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮತಿ ನೀಡಿದ್ದಾರೆ. ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸುತ್ತಿದ್ದೇವೆ. ತೆಲುಗು, ತಮಿಳು ಚಿತ್ರರಂಗದವರನ್ನು ಕರೆಯಲು ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದಿಂದ ಜಂಟಿಯಾಗಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಿದ್ದೇವೆ ಎಂದು ಅವರು ನುಡಿದಿದ್ದಾರೆ.
ಪುನೀತ್ ರಾಜ್ ಕುಮಾರ್ ನಿಧನದ ನೋವು ತಡೆದುಕೊಳ್ಳುವ ಶಕ್ತಿ ಯಾರಿಗು ಇಲ್ಲ. ಅಂದು ಸುಮಾರು 20 ಲಕ್ಷ ಜನ ದರ್ಶನ ಪಡೆದಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾಹಿತಿ ನೀಡಿದ್ದಾರೆ. ‘ಪುನೀತ ನಮನ’ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಿದ್ದೇವೆ. ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸಂಗೀತ ನಮನ ಕೂಡ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಚಿತ್ರರಂಗದವರಿಗೆ ಮಾತ್ರ ಸೀಮಿತ:
ಸಂಗೀತ ನಮನದ ಉಸ್ತುವಾರಿಯನ್ನು ಗುರುಕಿರಣ್ ವಹಿಸಿಕೊಂಡಿದ್ದಾರೆ. ಚಿತ್ರರಂಗದವರಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮ ಇದಾಗಿದ್ದು, ರಾಜ್ ಕುಟುಂಬದ ಸದಸ್ಯರು ಇರಲಿದ್ದಾರೆ. ಚಿತ್ರರಂಗದ ಎಲ್ಲಾ ಸಂಘಟನೆ ,ಸಂಘ ಸಂಸ್ಥೆಗಳು ಭಾಗವಹಿಸಲು ಮನವಿ ಮಾಡುತ್ತೇವೆ. ಸಾರ್ವಜನಿಕರು ಮಾಧ್ಯಮಗಳ ಮೂಲಕ ನೋಡಿ ಸಹಕರಿಸಬೇಕು ಎಂದು ಸಾರಾ ಗೋವಿಂದು ವಿನಂತಿಸಿದ್ದಾರೆ.
****