ಇನ್ನೇನು ಎಲ್ಲವೂ ಒಳ್ಳೆಯದಾಗುತ್ತಿದೆ ಎನ್ನುವಾಗಲೇ ಅ.29 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನ ಸುದ್ದಿ ಕನ್ನಡ ಚಿತ್ರರಂಗ, ಅಪ್ಪು ಅಭಿಮಾನಿಗಳು, ಇಡೀ ಕರುನಾಡಿನ ಜನರಿಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಅಪ್ಪುವನ್ನ ಕಳೆದುಕೊಂಡು ಸ್ಯಾಂಡಲ್ ವುಡ್ ಬರಿದಾಗಿದೆ. ಕರುನಾಡಿನ ಜನ ಇದುವರೆಗೂ ಸಹ ಈ ಕಹಿ ಸತ್ಯವನ್ನ ಸ್ವೀಕರಿಸಲು ಸಾಧ್ಯವಾಗ್ತಿಲ್ಲ. ನಂಬಲಾಗದೇ ಕಣ್ಣೀರಿಡುತ್ತಿದ್ದಾರೆ.
ಈ ಕಾರಣಕ್ಕೆ ಯಾರೂ ಸಿನಿಮಾಗೆ ತೆರಳೋಕೆ ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಚಿತ್ರತಂಡ ಕೂಡ ಪ್ರಚಾರ ಮಾಡುವ ಹುಮ್ಮಸ್ಸಿನಲ್ಲಿ ಇಲ್ಲ. ಈ ಎಲ್ಲಾ ಕಾರಣಕ್ಕೆ ಚಿತ್ರದ ಬಾಕ್ಸ್ ಆಫೀಸ್ಗೆ ಹೊಡೆತ ಬಿದ್ದಿದೆ. ಇದು ಚಿತ್ರತಂಡದ ಚಿಂತೆಯನ್ನು ಹೆಚ್ಚಿಸಿದೆ. ಈ ಬಗ್ಗೆ ‘ಭಜರಂಗಿ 2’ ವಿಲನ್ ಚೆಲುವ ರಾಜ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
‘ಅಕ್ಟೋಬರ್ 29. ಒಂದು ಕಡೆ ಸಿನಿಮಾ ರಿಲೀಸ್ ಆಯ್ತು, ಮತ್ತೊಂದು ಕಡೆ ಪವರ್ ಸ್ಟಾರ್ ನಿಧನ ಹೊಂದಿದರು. ಒಂದು ಕಡೆ ಖುಷಿ, ಮತ್ತೊಂದು ಕಡೆ ದುಃಖ. ಅಂತಹ ದಿನ ಮರೆಯೋಕೆ ಸಾಧ್ಯವಿಲ್ಲ. ದೇವರ ಮಗನನ್ನು ಕಳೆದುಕೊಂಡೆವು. ಅವರು ನಮ್ಮ ಜತೆ ಇಲ್ಲ. ಭಜರಂಗಿ 2 ಮೂರು ವರ್ಷದ ಶ್ರಮ. ಆದರೆ, ಚಿತ್ರಕ್ಕೆ ರೆಸ್ಪಾನ್ಸ್ ಸಿಗುತ್ತಿಲ್ಲ. ನಮ್ಮ ಭವಿಷ್ಯ ಇಲ್ಲಿಗೆ ಕೊನೇ ಆಗುತ್ತಿದೆಯೇನೋ ಎನಿಸುತ್ತಿದೆ. ದಯವಿಟ್ಟು ನಮಗೆ ಸಪೋರ್ಟ್ ಕೊಡಿ. ನಮ್ಮನ್ನ ನಡುನೀರಲ್ಲಿ ಕೈಬಿಡಬೇಡಿ’ ಎಂದು ಚೆಲುವ ರಾಜ್ ಕೇಳಿಕೊಂಡಿದ್ದಾರೆ.
****