ದೊಡ್ಮನೆಯ ಯುವರತ್ನ, ಅಭಿಮಾನಿಗಳು ಪ್ರೀತಿಯಿಂದ ಬಾಯಿ ತುಂಬಾ ಕರೆಯೋ ಅಪ್ಪು ಸರ್ ಅಗಲಿಕೆ, ಬರೀ ರಾಜ್ ಕುಟುಂಬ, ಸಿನಿಮಾ ಇಂಡಸ್ಟ್ರಿಗೆ , ದೊಡ್ಮನೆ ಅಭಿಮಾನಿಗಳಿಗೆ ಮಾತ್ರ ವಲ್ಲ, ಪ್ರತಿಯೊಬ್ಬ ಕನ್ನಡಿಗನಿಗರಿಗೂ ಅರಗಿಸಿಕೊಳ್ಳಲಾಗದ ಸತ್ಯ. ಎಂದಿನಂತೆ ಸೆಲೆಬ್ರಿಟಿಗಳು ಹುಷಾರು ತಪ್ಪಿ ಆಸ್ಪತ್ರೆಗೆ ಸೇರ್ತಾ ಇದ್ದಂತೆ, ಸುದ್ದಿ ಪ್ರಸಾರ ಆಗುತ್ತೆ, ಆದ್ರೆ ಸಾವನ್ನು ಖಚಿತ ಪಡಿಸುವ ಮುನ್ನ, ಅಭಿಮಾನಿಗಳನ್ನ ಹ್ಯಾಂಡಲ್ ಮಾಡಲು ದೊಡ್ಡ ಮಟ್ಟದಲ್ಲಿ ಪ್ಲಾನ್ ಮಾಡಲಾಗುತ್ತೆ. ರಾಜ್ಯದ ಗೃಹ ಇಲಾಖೆ, ಸೆಲೆಬ್ರಿಟಿಗಳ ಕುಟುಂಬದ ಜೊತೆಗೆ ಕೂತು ಒಂದು ಪ್ಲಾನ್ ರೆಡಿ ಮಾಡ್ತಾರೆ. ಡಾ.ರಾಜ್ ಸೇರಿದಂತೆ ಅನೇಕ ಕನ್ನಡ ಮೇರು ನಟರ ಅಂತಿಮ ದರ್ಶನದ ವೇಳೆ ನಡೆದ ಗಲಭೆ ಗಲಾಟೆಗಳೇ ಇದಕ್ಕೆ ಕಾರಣ.
ಪುನೀತ್ ರಾಜ್ಕುಮಾರ್ ಅವ್ರ ವಿಷಯದಲ್ಲೂ, ಊರೆಲ್ಲಾ ಸುದ್ದಿ ಹಬ್ಬಿ, ಅಭಿಮಾನಿಗಳು ವಿಕ್ರಂ ಆಸ್ಪತ್ರೆಗೆ ಭೆಟಿ ನೀಡಲು ಶುರು ಮಾಡಿದ್ರೂನು, ಮಿಡಿಯಾ ಹಾಗೂ ಆಸ್ಪತ್ರೆ ಸಿಬ್ಬಂದಿ ಅಧಿಕೃತ ಘೋಷಣೆ ಮಾಡಲಿಲ್ಲ, ಎಲ್ಲವೂ ವ್ಯವಸ್ಥೆ ಆದ ಮೇಲೆ ಮಧ್ಯಾಹ್ನ 2.30 ಸುಮಾರಿಗೆ ವಿಷಯ ಬಹಿರಂಗ ಪಡಿಸಿ, ಕಂಠೀರವ ಸ್ಟೇಡಿಯಂನಲ್ಲಿ ಅಂದು ಸಂಜೆಯಿಂದ ಅಂತಿಮ ದರ್ಶನಕ್ಕೆ ಅವಕಾಶ ನೀಡಿ, ಬೆಂಗಳೂರಿನಲ್ಲಿ ಮದ್ಯ ನಿಷೇಧ ಮಾಡಿ, ಶನಿವಾರ ಇಡೀ ದಿನ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಯ್ತು.
ಸುಮಾರು 15 ಲಕ್ಷ ಜನ ಅಭಿಮಾನಿಗಳು ಅಪ್ಪು ಅಂತಿಮ ದರ್ಶನ ಪಡೆದರು ಅನ್ನೋ ಮಾಹಿತಿ ಬಂತು, ಹಾಗಲು ರಾತ್ರಿ ಎನ್ನದೇ ಬರೋಬ್ಬರಿ 36 ಗಂಟೆಗಳ ಕಾಲ ಕಂಠೀರವ ಸ್ಟೇಡಿಯಂನಲ್ಲಿ ಅಭಿಮಾನಿಗಳು ಅಪ್ಪುವನ್ನ ನೋಡಲು ಸಾಗರದ ರೂಪದಲ್ಲಿ ಹರಿದು ಬಂದ್ರು, ವ್ಯವಸ್ಥಿತವಾಗಿ ಸರದಿಯಲ್ಲಿ ನಿಂತು ಸಾಗಿ ಬರುವ ವ್ಯವಸ್ಥೆಯನ್ನ ಮಾಡಲಾಗಿತ್ತು. ಮಕ್ಕಳು, ಯುವಕರು, ಮಹಿಳೆಯರೂ ಸೇರಿದಂತೆ, ವೃದ್ಧರೂ ಕೂಡ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು, ಇದಕ್ಕೆ ಕಾರಣ ಸಂಯಮ ಕಳೆದು ಕೊಳ್ಳದ ಅಭಿಮಾನಿಗಳು, ಇದು ದೊಡ್ಮನೆ ರಾಜಕುಮಾರನಿಗೆ ನೀಡಿದ ನಿಜ ರೂಪದ ಅಂತಿಮ ವಂದನೆ.

ಜೈಕಾರಗಳು ಇದ್ವು, ಹಾಡುವ ತಂಡಗಳು ಇದ್ವು, ದುಃಖಿಸುವ ಮನಸ್ಸುಗಳು ಸಾವಿರವಿದ್ವು, ಅಪ್ಪು ಇಷ್ಟ ಪಡುವ ತಿನಿಸು, ವಸ್ತುಗಳನ್ನ ಹಿಡಿದು ಬಂದ ಅಭಿಮಾನಿಗಳಿದ್ರು, ಎಲ್ಲದರ ಜೊತೆಗೆ ತಮ್ಮ ಮನೆಮಗನ, ಅಣ್ಣ ತಮ್ಮನ, ಸಾವಿಗೆ ಬಂದವರ ರೀತಿಯಲ್ಲಿ ಅಲ್ಲೊಂದು ತಾಳ್ಮೆಯ ನಡೆಯಿತ್ತು, ವೀರ ಕನ್ನಡಿಗನ ಸಿನಿಮಾಗಳನ್ನ ನೋಡಿ ಅಭಿಮಾನಿಗಳು ಏನನ್ನು ಕಲಿತರು ಅನ್ನೋದನ್ನ ಜಗತ್ತಿಗೆ ಸಾರಿ ತೋರಿಸಿದ್ರು ಅಭಿಮಾನಿಗಳು. ಇದಲ್ಲವೇ ನಿಜ ಅಭಿಮಾನ, ಇದಲ್ಲವೆ ನಿಜ ಪ್ರೀತಿ, ಇದಲ್ಲವೆ ಅಭಿಮಾನಿಗಳನ್ನೇ ದೇವರೆಂದ ಮನೆಗೆ ಅಭಿಮಾನಿಗಳು ನೀಡುವ ಗೌರವ.
****