18.9 C
Bengaluru
Tuesday, February 7, 2023
spot_img

ಪುನೀತ್ ಸಾವಿಗೆ ಸಿನಿ,ಕ್ರೀಡೆ,ರಾಜಕೀಯ ಗಣ್ಯರಿಂದ ಸಂತಾಪ!

ಕನ್ನಡ ಚಿತ್ರರಂಗದ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಮ್ಮನ್ನು ಅಗಲಿದ್ದಾರೆ. ಬೆಳಗ್ಗೆ ಜಿಮ್ ನಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ದಾಖಲಾದ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಮತ್ತು ಚಿಕಿತ್ಸೆ ಫಲಕಾರಿಯಾಗದೆ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ.

ಕೇವಲ 46ನೇ ವಯಸ್ಸಿಗೆ ಪುನೀತ್ ರಾಜ್ ಕುಮಾರ್  ವಿದಾಯ ಹೇಳಿದ್ದಾರೆ. ಪುನೀತ್ ಅವರ ನಿಧನಕ್ಕೆ ಚಿತ್ರರಂಗ, ಕ್ರೀಡಾ ಜಗತ್ತಿನ ಗಣ್ಯರು, ರಾಜಕೀಯ ಗಣ್ಯರು ಸೇರಿದಂತೆ ಹಲವರು ತಮ್ಮ ಸಂತಾಪ ಸೂಚಿಸಿದ್ದಾರೆ. ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿರುವ ಖ್ಯಾತ ಬಾಲಿವುಡ್ ನಟ ಸೋನು ಸೂದ್ ‘ನಿಮ್ಮ ಕೊರತೆ ಕಾಡಲಿದೆ ಅಣ್ಣ’ ಎಂದಿದ್ದಾರೆ.

ಪುನೀತ್ ನಿಧನಕ್ಕೆ ಕಂಬನಿ ಮಿಡಿದಿರುವ ಖ್ಯಾತ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ‘ಪುನೀತ್ ಸಾವು ನೋವು ತಂದಿದೆ. ಅವರ ಸಾವು ಕನ್ನಡ ಚಿತ್ರರಂಗಕ್ಕೆ ಒಂದು ದೊಡ್ಡ ಆಘಾತ, ದೇವರು ಅವರಿಗೆ ಸದ್ಗತಿ ನೀಡಲಿ, ಓಂ ಶಾಂತಿ’ ಎಂದು ಹೇಳಿದ್ದಾರೆ.

ಪುನೀತ್ ಅಗಲಿಕೆಗೆ ನೋವಿನಿಂದ ಪ್ರತಿಕ್ರಿಯೆ ನೀಡಿರುವ ಕನ್ನಡಿಗ ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್, ‘ಪುನೀತ್ ರಾಜ್ ಕುಮಾರ್ ಸಾವು ನೋವು ತಂದಿದೆ. ಅವರ ಕುಟುಂಬ, ಸ್ನೇಹಿತವರ್ಗ ಹಾಗೂ ಅಭಿಮಾನಿ ಬಳಗಕ್ಕೆ ನನ್ನ ಸಾಂತ್ವನಗಳು. ನೋವಿನ ಈ ಸಂದರ್ಭದಲ್ಲಿ ಅಭಿಮಾನಿಗಳು ಶಾಂತಿಯನ್ನು ಕಾಪಾಡಿ ಅವರ ಸದ್ಗತಿಗೆ ಪ್ರಾರ್ಥಿಸಬೇಕು. ಓಂ ಶಾಂತಿ’ ಎಂದು ಹೇಳಿದ್ದಾರೆ.

ಪುನೀತ್ ನಿಧನಕ್ಕೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ” ಪುನೀತ್ ರಾಜ್ ಕುಮಾರ್ ಅವರಂತಹ ಪ್ರತಿಭಾವಂತ ನಟನ ಅಗಲಿಕೆ ಅಪಾರ ನೋವು ತಂದಿದೆ. ಅವರು ತಮ್ಮ ಉತ್ತಮ ನಟನಾ ಕೌಶಲ್ಯ ಮತ್ತು ತಮ್ಮ ಸರಳತೆಯ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದರು. ಅವರ ಅಗಲಿಕೆ ಕರ್ನಾಟಕಕ್ಕೆ ತುಂಬಲಾರದ ನಷ್ಟ’ ಎಂದು ಹೇಳಿದ್ದಾರೆ. ಈ ಕುರಿತು ತಮ್ಮ ಮತ್ತೊಂದು ಟ್ವೀಟ್ ನಲ್ಲಿ ಬರೆದುಕೊಂಡಿರುವ ಸಿದ್ಧಮಯ್ಯ ಅವರು, ‘ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀ ಡಾಗಿದ್ದೇನೆ. ನಟನಾ ಕೌಶಲ್ಯದ ಜೊತೆ ಸರಳ ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ. ಪುನೀತ್ ಸಾವು ತುಂಬಲಾರದ ನಷ್ಟ. ರಾಜ್ ಕುಮಾರ್ ಕಾಲದಿಂದಲೂ ಅವರ ಕುಟುಂಬದ ಜೊತೆಯಲ್ಲಿ ಆತ್ಮೀಯ ಸಂಬಂಧ ಹೊಂದಿದ್ದ ನನ್ನ ಪಾಲಿಗೆ ಪುನೀತ್ ಸಾವು ಮನೆ ಸದಸ್ಯನೋಬ್ಬನನ್ನು ಕಳೆದುಕೊಂಡ ಶೋಕ. ಪುನೀತ್ ಕುಟುಂಬ ಹಾಗೂ ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ’ ಎಂದು ಹೇಳಿದ್ದಾರೆ.

ಪುನೀತ್ ಸಾವಿನ ಹಿನ್ನೆಲೆ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿರುವ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು ‘ಕನ್ನಡದ ಖ್ಯಾತನಟ ಶ್ರೀ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದು ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಕನ್ನಡಿಗರ ಮೆಚ್ಚಿನ ನಟ ಅಪ್ಪು ನಿಧನದಿಂದ ಕನ್ನಡ ಹಾಗೂ ಕರ್ನಾಟಕಕ್ಕೆ ಅಪಾರ ನಷ್ಟವಾಗಿದ್ದು, ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಅಭಿಮಾನಿಗಳಿಗೆ ಈ ನೋವನ್ನು ಸಹಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ” ಎಂದಿದ್ದಾರೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles