ರಾಘವೇಂದ್ರ ರಾಜ್‍ಕುಮಾರ್ ಅವರಿಗೆ ಈ ಪರಿಯ ಸಂಯಮ ಹಾಗೂ ಗಟ್ಟಿತನ ಅದೆಲ್ಲಿಂದ ಬಂದಿದೆ? ಯಾವುದೇ ಸಮಯದಲ್ಲಿ ಧೃತಿಗೆಡದೆ, ಅಣ್ಣಾವ್ರ ನಂತರ ಇಡೀ ಕುಟುಂಬವನ್ನು ಯಾವುದೇ ಸಮಯದಲ್ಲಿ ಅವರು ಮುನ್ನಡೆಸುವ ಪರಿ, ದಂಗಾಗಿಸುತ್ತದೆ. ಇವತ್ತೂ ಮಾಧ್ಯಮಗಳೆದುರು ಅವರಾಡಿದ ಮಾತುಗಳು, ತಮ್ಮ ಕುಟುಂಬದ ಜೊತೆ ಜೊತೆಗೆ ಅಭಿಮಾನಿಗಳ ಬಗ್ಗೆಯೂ ಯೋಚಿಸಿದ ಪರಿ, ಇಂಥಾ ಸಮಯದಲ್ಲೂ ರಾಘಣ್ಣನ ಸ್ಥೈರ್ಯ ಮೆಚ್ಚುವಂತಾದ್ದು.
ಪುನೀತ್ ನನ್ನು ಕಳೆದುಕೊಂಡ ನೋವಿನಲ್ಲಿದ್ರು ಆಸ್ಪತ್ರೆಯಿಂದ ಹೊರಬಂದ ಪುನೀತ್ ಅವರ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ”ನಾನು ಹೋಗಬೇಕಾಗಿತ್ತು, ಮಿಸ್ ಆಯ್ತು ‘ನನ್ನ ಮನೆಯಲ್ಲಿ ನನ್ನ ಮಕ್ಕಳ ಜೊತೆ ನೀನಿರು, ನಾನು ಮುಂದೆ ಹೋಗಿ ಅಪ್ಪ-ಅಮ್ಮನನ್ನು ನೋಡ್ಕಳ್ತೀನಿ’ ಅಂತ ಹೇಳಿ ಅವನೇ ಹೋಗಿ ಬಿಟ್ಟ.ನನಗೆ ಆಣೆ ಮಾಡಿ.. ಸಮಾಧಾನವಾಗಿ ಅವನನ್ನು ಕಳುಹಿಸಿಕೊಡೋಣ. ಪುನೀತ್‌ನನ್ನು ಕಳೆದುಕೊಂಡಿದ್ದೇವೆ. ಅಭಿಮಾನಿಗಳು ಶಾಂತ ಚಿತ್ತದಿಂದ ಅಪ್ಪುವನ್ನು ಕಳುಹಿಸಿ ಕೊಡಬೇಕು. ನೀವು ಅದಕ್ಕೆ ಸಹಕಾರ ಕೊಡಿ. ಹಿಂದೆ ಅಪ್ಪಾಜಿಗೆ ಏನಾಗಿತ್ತು ನಿಮಗೆ ಗೊತ್ತು. ಹೀಗಾಗಿ ಯಾವುದೇ ತೊಂದರೆ ಅಪ್ಪುಗೆ ಮಾಡೋದು ಬೇಡ. ನನ್ನನ್ನು ಎರಡು ಬಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಕರೆದುಕೊಂಡು ಹೋದ. ಆದರೆ ಅವನನ್ನು ಕರೆದುಕೊಂಡು ಹೋಗಲು ಆಗುತ್ತಿಲ್ಲ.
ಇಂಡಸ್ಟ್ರಿಗೆ ಹೇಗೆ ಪ್ರೀತಿಯಿಂದ ಬರಮಾಡಿಕೊಂಡ್ರೋ ಹಾಗೆ ಪ್ರೀತಿಯಿಂದ ಕಳುಹಿಸಿಕೊಡೋಣ, ಕೈ ಮುಗಿದು ಕೇಳಿಕೊಳ್ಳುತ್ತೇನೆ, ಎಲ್ಲಾರು ಸಹಕಾರ ಕೊಡಿ ನಮಗೆ. ನಿಮ್ಮೆಲ್ಲರಿಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತೇನೆ. ಅಪ್ಪು ನನ್ನ ನಂಬಿ ಹೋಗಿದ್ದಾನೆ ಅನ್ಸುತ್ತೆ. ಕಲಾವಿದರಿಗೆ ಯಾವತ್ತು ಸಾವಿಲ್ಲ” ಎಂದಿದ್ದಾರೆ.

****