67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಟ್ಟಿ ಕಳೆದ ಮಾರ್ಚ್ ನಲ್ಲಿ ಘೋಷಣೆಯಾಗಿತ್ತು. ಆ ಪಟ್ಟಿಯಲ್ಲಿ ಅತ್ಯುತ್ತಮ ಸಿನಿಮಾ ಎಂಬ ಖ್ಯಾತಿ ಪಡೆದು ಸ್ಥಾನ ಪಡೆದ ಕನ್ನಡದ ಏಕೈಕ ಚಿತ್ರ ‘ಅಕ್ಷಿ’. ಹೊಸ ನಿರ್ದೇಶಕ ಮನೋಜ್ ಕುಮಾರ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ರಾಷ್ಟ್ರ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು ಮಾತ್ರವಲ್ಲದೆ, ಸಿನಿಪ್ರೇಕ್ಷಕರಲ್ಲಿ ನಿರೀಕ್ಷೆಯನ್ನ ಹೆಚ್ಚಿಸಿತ್ತು. ಇದೀಗ ಅಕ್ಷಿ ಸಿನಿಮಾ ತಂಡ ತನ್ನ ಪಾಲಿಗೆ ಬಂದ ಪ್ರಶಸ್ತಿಯನ್ನು ಸ್ವೀಕರಿಸುವ ಸಂತಸದಲ್ಲಿದೆ.
ದೆಹಲಿಯಲ್ಲಿ ಇಂದು ನಡೆಯಲಿರುವ ಸಮಾರಂಭದಲ್ಲಿ ‘ಅಕ್ಷಿ’ ಸಿನಿಮಾ ತಂಡ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಸ್ವೀಕರಿಸಲಿದೆ. ಡಾಕ್ಟರ್ ರಾಜಕುಮಾರ್ ಅವರ ಪ್ರೇರಣೆಯಿಂದ ಮೂಡಿದ ಕತೆ ಚಿತ್ರವಾಗಿ ತಯಾರಾಗಿತ್ತು. ನೇತ್ರದಾನದ ಕುರಿತು ಸಾಮಾಜಿಕ ಅರಿವು ಮೂಡಿಸಬೇಕು ಎಂಬ ನಿರ್ದೇಶಕರ ಗುರಿ ಸಿನಿಮಾದ ಮೂಲಕ ಈಡೇರಿದೆ.

ಈ ಕಥೆಯನ್ನು ಸಿನಿಮಾ ವಾಗಿಸುವ ಮುನ್ನ ನಿರ್ದೇಶಕರು ನೇತ್ರದಾನಕ್ಕೆ ಸಂಬಂಧಪಟ್ಟಂತೆ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಸಾಕಷ್ಟು ಅಧ್ಯಯನಗಳನ್ನು ನಡೆಸಿದ್ದರು. ಮಾತ್ರವಲ್ಲ, ನೇತ್ರದಾನದ ಬಗ್ಗೆ ಜನರಿಗೆ ಮನಸ್ಥಿತಿ ಹೇಗಿದೆ ಎಂಬುದನ್ನು ಕೂಡ ಅರ್ಥಮಾಡಿಕೊಂಡು ನಂತರ ಆ ಅಂಶಗಳನ್ನೆಲ್ಲಾ ಒಟ್ಟುಗೂಡಿಸಿ ಸಿನಿಮಾ ರೂಪಕ್ಕೆ ತಂದರು. ಅಂದಹಾಗೆ ‘ಅಕ್ಷಿ’ ಸಿನಿಮಾ ಮನೋಜ್ ಕುಮಾರ್ ಗೆ ಚೊಚ್ಚಲ ನಿರ್ದೇಶನವಾಗಿದೆ.
ಇಳಾ ವಿಟ್ಲ, ಗೋವಿಂದೇಗೌಡ ಮತ್ತು ಇಬ್ಬರು ಮಕ್ಕಳು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಸಂವೇದನಾಶೀಲ ಕಥೆಯನ್ನೊಳಗೊಂಡ ತನ್ನ ಮೊದಲ ಚಿತ್ರವೇ ರಾಷ್ಟ್ರಪ್ರಶಸ್ತಿಯ ಮನ್ನಣೆ ಪಡೆದಿರುವುದು ನಿರ್ದೇಶಕರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಸಂತಸವನ್ನುಂಟು ಮಾಡಿತ್ತು, ಇದೀಗ ಇಂದು ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವ ಕ್ಷಣ ಕೂಡ ಅವರ ಸಂತಸವನ್ನು ಇಮ್ಮಡಿಗೊಳಿಸಲಿದೆ.
****