ಕೊರೋನಾ 2ನೇ ಅಲೆ ತಗ್ಗಿದ ನಂತರ ಸರ್ಕಾರ ಅಕ್ಟೋಬರ್ 1 ರಿಂದ ಚಿತ್ರಮಂದಿರಗಳ ಸಂಪೂರ್ಣ ಭರ್ತಿಗೆ ಗ್ರೀನ್ ಸಿಗ್ನಲ್ ಕೊಟ್ಟಿತು. ಇದೇ ಅವಕಾಶಕ್ಕಾಗಿ ಕಾಯುತ್ತಿದ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆದವು, ಸಲಗ, ಕೋಟಿಗೊಬ್ಬ 3 ನಿನ್ನ ಸನಿಹಕೆ ಚಿತ್ರಗಳು ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿವೆ, ಆದರೆ ರಾತ್ರಿ ಕರ್ಫ್ಯೂ ಇರುವುದರಿಂದ ಸೆಕೆಂಡ್ ಶೋ ನಡೆಸಲು ಸಾದ್ಯವಾಗುತ್ತಿಲ್ಲಾ, ಹಾಗಾಗಿ ರಾತ್ರಿ ಕರ್ಫ್ಯೂ ತರೆವು ಮಾಡುವಂತೆ ಚಿತ್ರ ನಿರ್ಮಾಪಕರು ಸರ್ಕಾರಕ್ಕೆ ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಹಲವು ಕಡೆ ದಿನಕ್ಕೆ ಕೇವಲ ಮೂರು ಪ್ರದರ್ಶನ ಮಾತ್ರ ಸಾಧ್ಯವಾಗಿದೆ. ಉತ್ತರ ಕರ್ನಾಟಕದ ಕಡೆ ಬೆಳಗಿನ 9 ಗಂಟೆಯ ಪ್ರದರ್ಶನಕ್ಕೆ ಜನ ಬರುವುದು ಕಡಿಮೆ. ರಾತ್ರಿ 9 ಗಂಟೆಯ ನಂತರದ ಸೆಕೆಂಡ್ ಶೋಗೆ ಕುಟುಂಬ ಸಮೇತ ಸಿನಿಮಾ ನೋಡುವ ಅಭ್ಯಾಸ ಇಲ್ಲಿ ರೂಢಿಯಲ್ಲಿದೆ. ಇನ್ನು ಮಲ್ಟಿಪ್ಲೆಕ್ಸ್ಗಳಲ್ಲೂ ಸೆಕೆಂಡ್ ಶೋ ಮಾಡಲಾಗುತ್ತಿಲ್ಲ. ಬೆಂಗಳೂರಿನಲ್ಲಿ ದಿನಕ್ಕೆ 5 ಪ್ರದರ್ಶನ ನಡೆಯುತ್ತಿತ್ತು. 9.30ಕ್ಕೆ ಕೊನೆಯ ಪ್ರದರ್ಶನ ಶುರುವಾಗುತ್ತಿತ್ತು. ಈಗ ರಾತ್ರಿ 7.30, 8.30 ಗಂಟೆಗೇ ಪ್ರದರ್ಶನ ಕೊನೆಗೊಳ್ಳುತ್ತಿದೆ. ಇದರಿಂದಾಗಿ ಪ್ರಯೋಜನಕ್ಕಿಂತ ನಷ್ಟ ಉಂಟಾಗುತ್ತಿದೆ ಎಂದಿದ್ದಾರೆ ನಿರ್ಮಾಪಕರು.
ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ಸೂರಪ್ಪ ಬಾಬು ಮತ್ತಿತರರು ಸಾಮಾಜಿಕ ಜಾಲತಾಣದ ಮೂಲಕ ರಾತ್ರಿ ನಿಷೇಧ ತೆರವು ಮಾಡುವಂತೆ ಸರ್ಕಾರಕ್ಕೆ ಮತ್ತೆ ಮನವಿ ಸಲ್ಲಿಸಿದ್ದಾರೆ. ‘ಸೆಕೆಂಡ್ ಶೋ ಇಲ್ಲದೇ ಇರುವುದರಿಂದ ನಮಗೆ ಒಂದು ವಾರದಲ್ಲಿ2-3ಕೋಟಿ ನಷ್ಟ ಆಗಿದೆ. ಮಹಾರಾಷ್ಟ್ರ ಸರ್ಕಾರ ರಾತ್ರಿ ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ. ಅದರಂತೆ ನಮಗೂ ಅವಕಾಶ ನೀಡಿ ಅಂತ ಕೇಳುತ್ತಿದ್ದೇವೆ. ರಾತ್ರಿ 10ರ ನಂತರ ನಿಷೇಧ ಯಾಕೆ ಅಂತ ಗೊತ್ತಿಲ್ಲ. ಈಗ ಸಚಿವರು ಎಲೆಕ್ಷನ್ನಲ್ಲಿ ಬಿಝಿಯಾಗಿದ್ದಾರೆ. ಭೇಟಿ ಸಾಧ್ಯವಾಗುತ್ತಿಲ್ಲ. ಹಾಗಾಗಿ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿದ್ದೇವೆ’ ಎಂದಿದ್ದಾರೆ ನಿರ್ಮಾಪಕ ಸೂರಪ್ಪ ಬಾಬು.
****