31.5 C
Bengaluru
Tuesday, March 28, 2023
spot_img

ಯಶೋಮಾರ್ಗದಿಂದ ಚಂಪಕ ಸರಸು ಪುಷ್ಕರಣಿಗೆ ಹೊಸ ಮಾರ್ಗ..!

ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಇದೀಗ ವಿದೇಶದಲ್ಲೂ ರಾಕಿ ಭಾಯ್‌ ಎಂದು ಗುರುತಿಸಿಕೊಂಡಿದ್ದಾರೆ. ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಯಶ್ ಸಮಾಜ ಸೇವೆ, ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯಶೋಮಾರ್ಗ ಸಂಸ್ಥೆ ಆರಂಭಿಸಿ ವರ್ಷಗಳೇ ಉರುಳಿವೆ. ಈ ಸಂಸ್ಥೆ ಮೂಲಕ ಈಗಾಗಲೇ ರಾಜ್ಯದ ಹಲವು ಕಡೆ ಬತ್ತಿದ ಕೆರೆಗೆ ನೀರು ಹರಿಸಿರುವ ಈ ಸಂಸ್ಥೆ, ಇದೀಗ ಶಿವಮೊಗ್ಗದ ಪುಷ್ಕರಣಿಯನ್ನೂ ಸ್ವಚ್ಛಗೊಳಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ  ತಾಲೂಕಿನ ಆನಂದಪುರ ಬಳಿ ಇರುವ ಐತಿಹಾಸಿಕ ಪುಷ್ಕರಣಿ/ಕಲ್ಯಾಣಿಯನ್ನು ಶುಚಿಗೊಳಿಸುವ ಕಾರ್ಯಕ್ಕೆ ಯೋಶೋಮಾರ್ಗ ಮುಂದಾಗಿದೆ. 16ನೇ ಶತಮಾನದ ಈ ಪುಷ್ಕರಣಿ ಕೆಳದಿ ಅರಸರ ಕಾಲದ್ದು ಎನ್ನಲಾಗಿದೆ. ಈ ಕಲ್ಯಾಣಿ ರಾಜ್ಯದ ಕೆಳದಿ ಅರಸರ ಇತಿಹಾಸವನ್ನೇ ಹೇಳುತ್ತದೆ. ಈ ಪುಷ್ಕರಣಿಯನ್ನು ಸರಸು ಎಂದು ಕರೆಯಲಾಗುತ್ತದೆ. ಈ ಸರಸು ಪುಷ್ಕರಣಿಯನ್ನು ಸ್ಥಳೀಯರ ಶುಚಿ ಮಾಡಿ ಕಾಪಾಡಿಕೊಂಡು ಬಂದಿದ್ದರು. ಆದರೆ ಜಿಲ್ಲಾಡಳಿತ, ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷ್ಯದಿಂದ ಈ ಸ್ಥಳದ ಬಗ್ಗೆ ಲೇಖಕ ಶಿವಾನಂದ ಕಳವೆ ಅವರು ಯಶ್ ಗಮನಕ್ಕೆ ತಂದಿದ್ದರು. ತಕ್ಷಣವೇ ಯಶ್ ಈ ಐತಿಹಾಸಿಕ ಕಲ್ಯಾಣಿಯ ಪುನಶ್ಚೇತನಕ್ಕೆ ಒಪ್ಪಿಗೆ ನೀಡಿ, ಯಶೋಮಾರ್ಗದ ಮೂಲಕ ಕಾರ್ಯ ಶುರು ಮಾಡಿದ್ದರು. 

ಅಕ್ಟೋಬರ್ 17ರಂದು ಯಶೋಮಾರ್ಗದಡಿ ಶಿವಾನಂದ ಕಳವೆ ಮತ್ತು ಯಶ್ ಅಭಿಮಾನಿಗಳು ಸಣ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇನ್ನು ಎರಡು ವರ್ಷಗಳಲ್ಲಿ ಈ ಕಲ್ಯಾಣಿಗೆ 400 ವರ್ಷಗಳು ತುಂಬಲಿವೆ. ಹೀಗಾಗಿ ಕೊಳದ ಜಾಗದಲ್ಲಿ ಸ್ವಚ್ಛತೆ, ಕಟ್ಟೆ ದುರಸ್ತಿ, ಹಿಂಬಾಗಿಲು ರಿಪೇರಿ, ಹೊರ ಆವರಣವನ್ನು ಪ್ರವಾಸಿಗರಿಗೆ ಯೋಗ್ಯ ಸ್ಥಳವಾಗಿಸಿ, ದೇಗುಲ ಪುನಶ್ಚೇತನ,  ಗೇಟ್‌ ಮೂಲಕ ಇದಕ್ಕೆ ಭದ್ರತೆ ನೀಡುವ ಕೆಲಸಗಳನ್ನು ಯಶೋಮಾರ್ಗ ಮಾಡಿಕೊಡುವುದಾಗಿ ಒಪ್ಪಿಕೊಂಡಿತ್ತು. ಕಳೆದ ಐದಾರು ದಿನಗಳಲ್ಲಿ ಚಂಪಕ ಸರಸು ಪುಷ್ಕರಣಿ ಸ್ವಚ್ಛತಾ ಕಾರ್ಯಗಳೆಲ್ಲವೂ ಮುಗಿದಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಚಂಪಕ ಸರಸು ಕಲ್ಯಾಣಿ ಬಗ್ಗೆ ಲೇಖಕ ಅರುಣ್ ಪ್ರಸಾದ್ ಬರೆದಿರುವ  ಬೆಸ್ತರ ರಾಣಿ ಚಂಪಕ ಕೃತಿಯಲ್ಲಿ ಮಾಹಿತಿ ಲಭ್ಯವಿದೆ. ಚಂಪಕ ಸರಸು ಕಲ್ಯಾಣಿ ಬಗ್ಗೆ ನಾಲ್ಕೈದು ಕಥೆಗಳಿವೆ. ಆದರಲ್ಲಿ ಒಂದು ಕಥೆ, ಮಹರಾಜನಿಗೆ ಚಂಪಕ ಎಂಬ ಹೆಸರಿನ ಯುವತಿ ಮೇಲೆ ಮೋಹವಿತ್ತು. ಆಕೆಯನ್ನು ವರಿಸಿದ್ದ. ಈ ವಿಚಾರ ಮಹಾರಾಣಿ ಮತ್ತು ಊರಿನ ಜನರ ಗಮನಕ್ಕೆ ಬಂದ ನಂತರ ಎಲ್ಲರೂ ಆಕೆಯನ್ನು ಮೂದಲಿಸುತ್ತಿದ್ದರು. ಹೀಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಅವಳ ನೆನಪಿನಲ್ಲಿ ಈ ಕಲ್ಯಾಣಿ ನಿರ್ಮಾಣವಾಯಿತೆಂಬ ಕಥೆ ಇದೆ. ಒಟ್ಚಿನಲ್ಲಿ ಈ ಕಲ್ಯಾಣಿ ಹಾಗೂ ಚಂಪಕ ಎಂಬ ಹೆಣ್ಣಿನ ಸುತ್ತ ಅನೇಕ ಕಥೆಗಳು ಹೆಣೆದುಕೊಂಡಿವೆ. 

ಕೆಳದಿಯ ಶ್ರೀ ಗುಂಡ ಜೋಯಿಸ್ ವಯಸ್ಸು 92, ನಮ್ಮ ದೇಶದ ಹಿರಿಯ ಇತಿಹಾಸ ತಜ್ಞರು. ಕೆಳದಿ ಅರಸು ಮನೆತನದ ಬಗ್ಗೆ ಸುಮಾರು 60ವರ್ಷಗಳಿಂದ ಸಂಶೋಧನ ಕ್ಷೇತ್ರದಲ್ಲಿ ಕಾರ್ಯ ಮಾಡಿ ಕೆಳದಿಯ ಇತಿಹಾಸ ಸಂಶೋಧನ ಕೇಂದ್ರವನ್ನು 1962ರಲ್ಲಿ ಆರಂಭಿಸಿ ಅಪರೂಪದ ದಾಖಲೆ ಸಂಗ್ರಹಿಸಿ ಇಡೀ ದೇಶಕ್ಕೆ ಮಹತ್ವದ ಕೊಡುಗೆ ನೀಡಿದವರು.ಇವರು ಯಶ್ ಅವರ ಮತ್ತು ಯಶೋಮಾರ್ಗದ ಕಾರ್ಯದ ಕುರಿತು ಮೆಚ್ಚಿ ಮಾತಾಡಿದ್ದಾರೆ. ಒಟ್ಟಿನಲ್ಲಿ ಯಶೋಮಾರ್ಗದ ಮೂಲಕ ಪುಷ್ಕರಣಿ ಶುಚಿಗೊಂಡಿರುವುದಕ್ಕೆ ಸ್ಥಳೀಯರ ಮತ್ತು ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

ಪುಷ್ಕರಣಿಯ ವಿಹಂಗಮ ನೋಟ
ಪುಷ್ಕರಣಿಯ ವಿಹಂಗಮ ನೋಟ

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles