ಕಡಲ ತೀರದ ಭಾರ್ಗವ ಎಂದಾಕ್ಷಣ ದುತ್ತನೆ ಕಣ್ಮುಂದೆ ಬರುವ ವ್ಯಕ್ತಿತ್ವ ಶಿವರಾಮ ಕಾರಂತರು. ಆ ಜನಪ್ರಿಯ ಹೆಸರನ್ನು ಸಿನಿಮಾ ಶೀರ್ಷಿಕೆಯಾಗಿಸಿಕೊಂಡು ಸಿನಿಮಾವೊಂದು ಸೆಟ್ಟೇರಿದ್ದು ಕೂಡ ನಿಮಗೆ ಗೊತ್ತಿರಬಹುದು. ಹಾಗಂತ ಇದು ಕಾರಂತರ ಜೀವನ ಕಥೆಯಾ? ಅಂದ್ರೆ ಖಂಡಿತ ಅಲ್ಲ. ಸಿನಿಮಾ ಕಥೆಗೆ ಈ ಹೆಸರು ಸೂಕ್ತ ಎನ್ನಿಸಿದ್ದರಿಂದ ಕಡಲ ತೀರದ ಭಾರ್ಗವ ಎಂದು ಟೈಟಲ್ ಫಿಕ್ಸ್ ಮಾಡಿದೆ ಚಿತ್ರತಂಡ. ಇದೀಗ ‘ಕಡಲ ತೀರದ ಭಾರ್ಗವ’ ಚಿತ್ರತಂಡ ಟೀಸರ್ ಮೂಲಕ ಪ್ರೇಕ್ಷಕರೆದುರು ಬಂದಿದೆ.
ಹೊಸ ತಂಡವೊಂದು ಹೊಸ ಕನಸಿಟ್ಟುಕೊಂಡು ಹೊಸ ಹುರುಪಿನಿಂದ ಮಾಡಿರುವ ಸಿನಿಮಾ ‘ಕಡಲ ತೀರದ ಭಾರ್ಗವ’. ಟೀಸರ್ ಎಲ್ಲರ ಹುಬ್ಬೇರಿಸುವಂತಿದ್ದು, ಹೊಸಬರ ಸಿನಿಮಾ ಎನ್ನಲಾರದಷ್ಟು ಪ್ರಾಮಿಸಿಂಗ್ ಆಗಿ ಮೂಡಿಬಂದಿದೆ. ಒಂದಿಷ್ಟು ರೋಚಕತೆಯನ್ನು ಒಳಗೊಂಡಿರುವ ಟೀಸರ್ ತುಣುಕು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತೆ ಎಂಬ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅದಕ್ಕೆ ತಕ್ಕಂತೆ ಅನಿಲ್ ಸಿ.ಜೆ ಹಿನ್ನೆಲೆ ಸಂಗೀತದ ಜುಗಲ್ಬಂದಿಯಿದೆ. ಪ್ರೀತಿ, ಕೋಪ, ನೋವಿನ ಎಳೆ ಒಳಗೊಂಡ ಟೀಸರ್ ಖಂಡಿತ ಸಿನಿಮಾ ತಂಡ ಹೊಸದೇನನ್ನೋ ಹೇಳ ಹೊರಟಿದೆ ಎಂಬ ಫೀಲ್ ನೀಡದೇ ಇರದು.