ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ತಮಗೆ ವಂಚನೆಯಾಗಿದೆ ಎಂದು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ, ತನಿಖೆಗೆ ಆದೇಶಿಸಿದೆ. ಅದರಂತೆ ಸಂಜನಾ ಸ್ನೇಹಿತ ರಾಹುಲ್ ಥೋನ್ಸೆ ಸೇರಿದಂತೆ ಮೂವರ ವಿರುದ್ಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂಜನಾ ಆರೋಪಿಸಿರುವ ಪ್ರಕಾರ, ‘ತನ್ನ ಹಣ ಬಳಸಿಕೊಂಡು ರಾಹುಲ್ ಥೋನ್ಸೆ ಹಾಗೂ ಇತರರು ಲಾಭ ಗಳಿಸಿದ್ದಾರೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹಣ ತೊಡಗಿಸಿದ್ದಾರೆ. ಇದರಿಂದ ತನ್ನ ಘನತೆಗೆ ಧಕ್ಕೆ ಬರುವಂತಾಗಿದೆ. ಇದಲ್ಲದೇ ರಾಹುಲ್ ಥೋನ್ಸೆ ಸುಳ್ಳು ಆರೋಪ ಮಾಡಿದ್ದಾರೆ. ಆದ್ದರಿಂದ ರಾಹುಲ್ ವಿರುದ್ಧ ದೂರು ದಾಖಲಿಸಬೇಕು’ ಎಂದಿದ್ದಾರೆ. ಇದೀಗ ತಮಗಾಗಿದ್ದ ಅನ್ಯಾಯದ ಕುರಿತು ಎಳೆಎಳೆಯಾಗಿ ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದಾರೆ.
ರಾಹುಲ್ ಥೋನ್ಸೆ, ಅವರ ಪೋಷಕರಿಂದ ಪ್ರಾಣ ಬೆದರಿಕೆ ಇದ್ದು, ಅವಾಚ್ಯ ಶಬ್ದಗಳಿಂದ ಬೈದು ಮಾನಹಾನಿ ಮಾಡಿದ್ದಾರೆ. ಆದ್ದರಿಂದ ರಾಹುಲ್, ಅವರ ಪೋಷಕರ ವಿರುದ್ಧ ದೂರು ನೀಡಿರುವುದಾಗಿ ಸಂಜನಾ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಜೊತೆಗೆ ಕ್ಯಾಸಿನೋದಲ್ಲಿ ಹಣ ಹೂಡಲು ತಾನು ಹಣ ನೀಡಿರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರಹ ಹಂಚಿಕೊಂಡಿದ್ದಾರೆ.
****