ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನಗಳು ಆಗುತ್ತಲೇ ಇರುತ್ತವೆ. ಆ ಸಾಲಿಗೆ ಮತ್ತೊಂದು ಚಿತ್ರ ಸೇರುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಹೊಸಬರೇ ಅಂತರಾಷ್ಟ್ರೀಯ ಮಟ್ಟದ ತಂತ್ರಜ್ಞರೊಂದಿಗೆ ಸೇರಿಕೊಂಡು ಮಾಡಿರುವ ಸಿನಿಮಾವೀಗ ಸಖತ್ ಸೌಂಡ್ ಮಾಡುತ್ತಿದೆ. ಆ ಮೂಲಕ ನಮ್ಮ ನೆಲದಲ್ಲೂ ಪ್ರತಿಭಾವಂತ ತಂತ್ರಜ್ಞರಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
‘ಮಡ್ಡಿ’ ಎಂಬ ಹೆಸರಿನ ಸಿನಿಮಾ ಈಗ ತನ್ನ ವಿಶಿಷ್ಟ ಕಥೆ ಮತ್ತು ಮೇಕಿಂಗ್ ನಿಂದಾಗಿ ಎಲ್ಲರ ಗಮನಸೆಳೆಯುತ್ತಿದ್ದು, ಕೆಸರು ಪ್ರದೇಶದಲ್ಲಿ ನಡೆಯುವ ಜೀಪ್ ರೇಸ್ ನ ಕಥೆಯಾಗಿದೆ. ವಿಶೇಷವೆಂದರೆ, ಸಿನಿಮಾಗಾಗಿ ಈ ರೇಸ್ ನಲ್ಲಿ ತರಬೇತಿ ಪಡೆದುಕೊಂಡು ಎಲ್ಲಾ ಕಲಾವಿದರು ಡ್ಯೂಪ್ ಇಲ್ಲದೆ ನಟಿಸಿದ್ದಾರೆ. ಮಡ್ ರೇಸ್ ಗೆ ಇಳಿಯುವ ಎರಡು ತಂಡಗಳ ನಡುವಿನ ಜಿದ್ದಾಜಿದ್ದಿ ಮತ್ತು ಆ ತಂಡಗಳ ಕುಟುಂಬದ ಭಾವನಾತ್ಮಕ ಕಥೆಯನ್ನು ಸಹ ತೋರಿಸಲಾಗಿದೆ.
13 ಕ್ಯಾಮೆರಾಗಳನ್ನು ಚಿತ್ರೀಕರಣಕ್ಕೆ ಬಳಸಿದ್ದು, ಹಾಲಿವುಡ್ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ. ರತೀಶ್ ಸಿನಿಮಾಟೋಗ್ರಫಿ ಮಾಡಿದ್ದಾರೆ. ಪ್ರಗ್ಬಲ್ ದಾಸ್ ಎಂಬ ಯುವಕ ಮಡ್ಡಿ ಚಿತ್ರ ನಿರ್ದೇಶನ ಮಾಡುತ್ತಿದ್ದು, ಎರಡು ವರ್ಷಗಳ ಕಾಲ ಮಡ್ ರೇಸ್ ಬಗ್ಗೆ ರಿಸರ್ಚ್ ಮಾಡಿದ್ದಾರಂತೆ. ರವಿ ಬಸ್ರೂರು ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಚಿತ್ರತಂಡದಲ್ಲಿ ಯವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿದಾಸ್ ನಾಯರ್, ಹರೀಶ್ ಪೇರಡಿ, ವಿಜಯನ್, ರೆಂಜಿ ಪೆನಿಕರ್ ಇದ್ದಾರೆ. ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ‘ಮಡ್ಡಿ’ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ತಯಾರಿ ನಡೆಸಿದೆ.
****